Tuesday, 12 May 2020

ಅಭ್ಯಾಸ ಮುಖ್ಯವೋ? ಅಸೂಯೆ ಮುಖ್ಯವೋ?

ಅಭ್ಯಾಸ ಮುಖ್ಯವೋ? ಅಸೂಯೆ ಮುಖ್ಯವೋ?




ಸಮುರಾಯ್ ಗಳು ಎಂದರೆ ಹಿಂದಿನ ಕಾಲದಲ್ಲಿ ಜಪಾನಿನಲ್ಲಿ ಇರುತ್ತಿದ್ದ ಒಂದು ಜನಾಂಗ..
ಅವರು ವೃತ್ತಿಯಲ್ಲಿ ಯೋಧರು. ಅಂದಿನ ರಾಜರು ಈ ಸಮುರಾಯ್ ಗಳನ್ನು ಯುದ್ಧದ ಸಮಯಗಳಲ್ಲಿ ತಮ್ಮ ಪರವಾಗಿ ಕಾದಾಡಲು ತಾತ್ಕಾಲಿಕವಾಗಿ ನೇಮಿಸಿಕೊಳ್ಳುತ್ತಿದ್ದರಂತೆ. ಅವರಿಗೆ ಕೈತುಂಬ ಸಂಬಳ ಕೊಡುತ್ತಿದ್ದರು. ಸಂಬಳದ ಸಂಗಡ ಸಾಕಷ್ಟು ಉಡುಗೊರೆ ಗಳನ್ನೂ, ನಗದು ಬಹುಮಾನಗಳನ್ನೂ ಕೊಟ್ಟು ಕಳುಹಿಸುತ್ತಿದ್ದರಂತೆ.
ಒಂದು ಯುದ್ದ ಮುಗಿದ ನಂತರ ಮುಂದಿನ ಯುದ್ದದವರೆಗೆ ಅವರಿಗೆ ಬಿಡುವು ಕೊಡುತ್ತಿದ್ದರು..


ಒಂದೂರಿನಲ್ಲಿ ಇಬ್ಬರು ಯೋಧರಿದ್ದರು. ಇಬ್ಬರೂ ಬಾಹುಬಲದಲ್ಲಿ ಸಮಬಲರೇ. ಆದರೆ ಬುದ್ಧಿಬಲದಲ್ಲಿ ಮಾತ್ರ ಬೇರೆ ಬೇರೆ!

ಮೊದಲನೆಯಾತ ತನ್ನ ಕಾರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ. ಎರಡನೆಯಾತ ಮಾತ್ರ ಮತ್ತೊಬ್ಬನಿಗೆ ಏನು ಸಿಕ್ಕಿತು ಎಂಬುದರ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿದ್ದ. ತನಗೆ ಕಡಿಮೆ ಸಿಕ್ಕಿತು, ಮತ್ತೊಬ್ಬನಿಗೆ ಹೆಚ್ಚು ಸಿಕ್ಕಿತು ಎಂದು ಅಸೂಯೆ ಪಡುತ್ತಿದ್ದ.

ಒಮ್ಮೆ ಇಬ್ಬರೂ ಅಲ್ಲಿನ ರಾಜರ ಪರವಾಗಿ ಯುದ್ಧದಲ್ಲಿ ಭಾಗವಹಿಸಿದ್ದರು..
ಮೊದಲನೆಯ ಯೋಧನ ಯುದ್ಧ ಕೌಶಲವು ರಾಜರಿಗೆ ಹೆಚ್ಚು ಮೆಚ್ಚುಗೆಯಾಯಿತು. ಆತನಿಗೆ ರಾಜರಿಂದ ಬಿರುದು- ಬಾವಲಿಗಳೂ, ನಗದು ಬಹುಮಾನಗಳೂ ಸಿಕ್ಕವು. ಎರಡನೆಯಾತ ಎಂದಿನಂತೆ ತನ್ನ ಕರ್ತವ್ಯಕ್ಕಿಂತ ಹೆಚ್ಚಾಗಿ ಮೊದಲನೆಯಾತನ ಕಾರ್ಯದ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿದ್ದ. ಆತನ ಹೋರಾಟ ಕಳಪೆಯದ್ದಾಗಿತ್ತು. ಹಾಗಾಗಿ ರಾಜರು ಆತನಿಗೆ ಸಲ್ಲಬೇಕಾದಷ್ಟೇ ಸಂಬಳವನ್ನು ಮಾತ್ರ ಕೊಟ್ಟು ಕಳುಹಿಸಿದರು. ಇಬ್ಬರೂ ತಮ್ಮೂರಿಗೆ ಬಂದಾಗ ಮೊದಲನೆಯಾತನಿಗೆ ವೀರೋಚಿತ ಸ್ವಾಗತ ಸಿಕ್ಕಿತು..

ಆತನಿಂದ ತಮ್ಮೂರಿನ ಮರ್ಯಾದೆ ಹೆಚ್ಚಾಯಿತೆಂದು ಪರಿಗಣಿಸಿದ ಊರಿನ ಜನ ಆತನ ಪ್ರತಿಮೆಯನ್ನು ಊರಿನಲ್ಲಿ ಸ್ಥಾಪಿಸಿ ಗೌರವಿಸಿದರು..

ಎರಡನೆಯಾತ ಊರಿಗೆ ಮರಳಿ ಬಂದುದನ್ನು ಗಮನಿಸಲೂ ಇಲ್ಲ. ಇದರಿಂದಾಗಿ ಎರಡನೆಯಾತನ ಹೊಟ್ಟೆ ಉರಿ ಹೆಚ್ಚಾಯಿತು. ಪ್ರತಿ ಬಾರಿ ಮೊದಲನೆಯ ಯೋಧನ ಪ್ರತಿಮೆಯ ಮುಂದೆ ನಡೆದು ಹೋಗುವಾಗ ಈತ ಅಸೂಯೆಯಿಂದ ಕುದಿಯುತ್ತಿದ್ದ..

ಅವರಿಬ್ಬರಿಗೂ ಮುಂದಿನ ಯುದ್ಧಕ್ಕೆ ಹೋಗುವುದರ ಮೊದಲು ನಾಲ್ಕು ವಾರಗಳ ಬಿಡುವು ಸಿಕ್ಕಿತ್ತು. ಬಿಡುವಿನ ಕಾಲದಲ್ಲಿ ಮೊದಲನೆಯಾತ ವ್ಯಾಯಾಮ ಶಾಲೆಗೆ ಹೋಗುತ್ತಿದ್ದ. ತಮ್ಮ ಗುರುಗಳ ಬಳಿಗೆ ಹೋಗುತ್ತಿದ್ದ, ಮತ್ತಷ್ಟು ಅಭ್ಯಾಸ ಮಾಡುತ್ತಿದ್ದ.

ಆದರೆ ಎರಡನೆಯಾತ ಅಸೂಯೆಯಿಂದ ಕುದಿಯುವುದನ್ನು ಬಿಟ್ಟು ಮತ್ತೇನೂ ಮಾಡುತ್ತಿರಲಿಲ್ಲ. ರಾತ್ರಿಯ ಹೊತ್ತು ಊರಿನವರೆಲ್ಲಾ ಮಲಗಿದ್ದಾಗ ಮೊದಲನೆಯಾತನ ಪ್ರತಿಮೆಯ ಬಳಿ ಹೋಗಿ ಅದರ ಬುಡವನ್ನು ಒಂದಷ್ಟಷ್ಟೇ ಕಡಿದು ಬರುತ್ತಿದ್ದ.  ಕೆಲವು ದಿನಗಳ ನಂತರ ಆ ಪ್ರತಿಮೆಯು ತಾನೇ ತಾನಾಗಿ ನೆಲಕ್ಕೆ ಉರುಳಿ ಬೀಳುತ್ತದೆಂದು ಭಾವಿಸುತ್ತಿದ್ದ. ನಾಲ್ಕು ವಾರಗಳ ಸಮಯ ಕಳೆಯಿತು. ಮರುದಿನ ಯುದ್ಧಕ್ಕೆ ಹೊರಡಬೇಕಿತ್ತು. ದಿನಾ ಮಾಡುತ್ತಿದ್ದ ಸಮರಾಭ್ಯಾಸದಿಂದ ಮೊದಲನೆಯ ಯೋಧನ ಧೈರ್ಯ-ಸ್ಥೈರ್ಯಗಳು ಹೆಚ್ಚಾದವು. ಆತ ಆತ್ಮ ವಿಶ್ವಾಸದಿಂದ ಎದೆಯುಬ್ಬಿಸಿ ನಡೆಯುತ್ತಿದ್ದ.

ಎರಡನೆಯಾತ ನಾಳೆ ಪ್ರತಿಮೆ ಕುಸಿದು ಬೀಳುವ ನಿರೀಕ್ಷೆಯಲ್ಲಿ ಒಳಗೊಳಗೇ ಖುಷಿ ಪಟ್ಟುಕೊಳ್ಳುತ್ತಿದ್ದ..

ಅಂದು ರಾತ್ರಿಯೂ ಆತ ಮಧ್ಯರಾತ್ರಿ ಸಮಯದಲ್ಲಿ ಪ್ರತಿಮೆಯ ಬಳಿ ಹೋಗಿ ಪ್ರತಿಮೆಯ ಬುಡವನ್ನು ಕಿತ್ತೆಸೆಯುವ ಕಾರ್ಯ ಮಾಡುತ್ತಿದ್ದ. ಅವರು ಅಂದುಕೊಂಡಂತೆ ಪ್ರತಿಮೆಯು ಕುಸಿದು ಬಿತ್ತು. ಆದರೆ ಬುಡದಲ್ಲಿ ಕುಳಿತಿದ್ದ ಅವನ ಮೇಲೆಯೇ ಬಿತ್ತು. ಅವನ ಬಲಿ ತೆಗೆದುಕೊಂಡಿತು..


ಮರುದಿನ ಮುಂಜಾನೆ ಯೋಧನ ವಿಜಯ ಯಾತ್ರೆಯ ಆರಂಭದ ಜತೆಯಲ್ಲೇ ಎರಡನೆಯ ಯೋಧನ ಕಳೇಬರದ ಅಂತಿಮ ಯಾತ್ರೆಯನ್ನೂ ಊರಿನವರು ಮಾಡಬೇಕಾಗಿ ಬಂದಿತ್ತು!


ಈಗ ಶತಮಾನಗಳ ಹಿಂದೆ ಸಮುರಾಯ್‌ಗಳ ಬದುಕಿನಲ್ಲಿ ಅಭ್ಯಾಸ ಅಥವಾ ಅಸೂಯೆಗಳು ಉಂಟು ಮಾಡುವ ಪರಿಣಾಮದ ಬಗ್ಗೆ ನೋಡಿದ್ದೇವಲ್ಲವೇ?

ಇಂದಿನ ಶತಮಾನದ ನಮ್ಮ ಬದುಕಿಗೂ ಅವು ಅನ್ವಯವಾಗುತ್ತವೆ ಅಲ್ಲವೇ...?


ನೀತಿಕಥೆ

ಒಳ್ಳೆಯ ನೀತಿಕಥೆ...

ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ...
ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು..
ಆದರೆ ಇಬ್ಬರು ರಾಜರೂ ಸಹ ರಥವನ್ನು ಹಿಂದೆಗೆಯಲು ಸಿದ್ಧರಿರಲಿಲ್ಲ..
 ಕೊನೆಗೆ ಇಬ್ಬರ ರಾಜರ ರಥಸಾರಥಿಯರು ಒಂದು ಒಪ್ಪಂದಕ್ಕೆ ಬಂದರು..
ಇಬ್ಬರೂ ತಮ್ಮ ರಾಜನು ಮಾಡಿದ ಸತ್ಕಾರ್ಯಗಳನ್ನು ಕುರಿತು ಹೇಳುವುದು. ಯಾವ ರಾಜನು ಹೆಚ್ಚಿನ ಸತ್ಕಾರ್ಯಗಳನ್ನು ಮಾಡಿ ರುತ್ತಾರೋ ಅಂತಹ ರಾಜನು ಮುಂದೆ ಹೋಗುವುದು. ಇನ್ನೊಬ್ಬ ರಾಜನು ರಥವನ್ನು ಹಿಂತೆಗೆದುಕೊಳ್ಳುವುದು..

ಮೊದಲನೆಯ ರಾಜನ ಸಾರಥಿಯು, ಹೇಳುವನು"ನಮ್ಮ ಮಹಾರಾಜರು ಪ್ರತಿದಿನವೂ  ಕನಿಷ್ಟ ಒಂದು ನೂರು ಜನ ಹಸಿವೆಯಿಂದ ಬಳಲುವ ಅಭಾಗ್ಯರಿಗೆ
ಭೋಜನ ಏರ್ಪಡಿಸಿದ ನಂತರವೇ ತಾವು ಭೋಜನ ಮಾಡುತ್ತಾರೆ. ತೊಡಲು ಬಟ್ಟೆ ಇಲ್ಲದ ನಿರ್ಗತಿಕರು ಕನಿಷ್ಠ ಐದುನೂರು ಜನರಿಗೆ ಬಟ್ಟೆ ಹಂಚುತ್ತಾರೆ. ರಾಜ್ಯದಲ್ಲಿ ಅನೇಕ ಅನಾಥಾಲಯಗಳನ್ನು ಮತ್ತು ವೃದ್ಧಾಶ್ರಮ ಗಳನ್ನು ಕಟ್ಟಿಸಿರುತ್ತಾರೆ. ಬಡಬಗ್ಗರಿಗೆ,ರಿಯಾಯಿತಿ ದರದಲ್ಲಿ ಧಾನ್ಯಗಳು ಸಿಗುವ ಏರ್ಪಾಟು ಮಾಡಿದ್ದಾರೆ. ಇವೇ ಮುಂತಾದ ಅನೇಕ  ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ..."

ಇಷ್ಟು ಹೇಳಿದ ನಂತರ ಎರಡನೇ ರಾಜನ ಸಾರಥಿಯು, ತಲೆ ಬಗ್ಗಿಸಿ,ಕಣ್ಣಲ್ಲಿ ನೀರಿಡುತ್ತಾ ತನ್ನ ರಥವನ್ನು ಹಿಂತೆಗೆಯಲು ಅನುವಾದನು..

ಅದನ್ನು ನೋಡಿ, ಆ ಮೊದಲನೆಯ ರಾಜ ಕೇಳಿದನು, "ಎಲೈ ಸಾರಥಿಯೇ! ಹೀಗೇಕೆ ಒಮ್ಮಿಂದೊಮ್ಮೆ ರಥವನ್ನು ಹಿಂತೆಗೆಯಲು  ಸಿದ್ಧನಾಗಿರುವೆ? ನಿಮ್ಮ ರಾಜನಲ್ಲಿ ದಾನಗುಣವಿಲ್ಲವೇ?ನಿಮ್ಮ ರಾಜನು ಯಾವ ಸತ್ಕಾರ್ಯಗಳನ್ನೂ ಮಾಡಲಿಲ್ಲವೇ?"

ಅದಕ್ಕೆ ಆ ಎರಡನೇ ರಾಜನ ಸಾರಥಿ ಸವಿನಯವಾಗಿ ಹೇಳುತ್ತ ಹೇಳುತ್ತಾನೆ..
 " ರಾಜಾ, ನಮ್ಮ ರಾಜ್ಯದಲ್ಲಿ  ನಮ್ಮ ರಾಜನು ದಾನ ಮಾಡುತ್ತ ಇರುವುದನ್ನು ನೋಡುವ ಅದೃಷ್ಟ ಯಾರಿಗೂ ಸಿಕ್ಕಿಲ್ಲ. ನಮ್ಮ ರಾಜ್ಯದಲ್ಲಿ, ದಾನ ಮಾಡಬೇಕೆಂದರೆ ಸಾಮಾನ್ಯರಾದ ನಮ್ಮಂತಹವರಲ್ಲಿಯೇ ಒಬ್ಬರೂ ದಾನ ಸ್ವೀಕರಿಸಲು ದೀನದಲಿತರಿಲ್ಲ.. ಯಾವ ವೃದ್ಧರಿಗೂ ವೃದ್ಧ ಆಶ್ರಮದಲ್ಲಿ ಇರುವ ಅವಶ್ಯಕತೆ ಬಂದಿಲ್ಲ..
ಹೀಗಾಗಿ ನಮ್ಮರಾಜರಿಗೆ ದಾನಮಾಡುವ ಅವಕಾಶ ಹೇಗೆ ಸಿಗಬೇಕು?

ಇದನ್ನು ಕೇಳಿ ಮೊದಲನೆಯ ರಾಜನು ತಕ್ಷಣವೇ ತನ್ನ ರಥದಿಂದ  ಕೆಳಗಿಳಿದುಬಂದು , ಎರಡನೆಯ ರಾಜನಿಗೆ ನಮಿಸಿ,ತನ್ನ ರಥವನ್ನು ಹಿಂದಕ್ಕೆ ತೆಗೆಸಿದನು..

*ಸಾವಿರಾರು ವೃದ್ಧಾಶ್ರಮಗಳೂ, ಅನೇಕಾನೇಕ  ಸಂಕ್ಷೇಮಭಿವೃದ್ಧಿ ಕಾರ್ಯಕ್ರಮಗಳು, ರಿಯಾಯಿತಿಗಳು, ಉಚಿತಗಳೂ,  ವರ್ಷಾನುಗಟ್ಟಲೆ ಅಮಲಿನಲ್ಲಿರುವ ದೇಶ ಮತ್ತು ಇಂತಹ ರಿಯಾಯಿತಿಗಳೂ ಮತ್ತು ಉಚಿತ ಕಾರ್ಯ ಕ್ರಮಗಳಿಗಾಗಿ ಆಸೆ ಪಡುವ ಪ್ರಜೆಗಳು ಇರುವ ಯಾವ ದೇಶವೂ ಒಳ್ಳೆಯ ಆಳ್ವಿಕೆಯಲ್ಲಿಲ್ಲ ಎಂದರ್ಥ..*

*ಪಾಲಕರ ಮತ್ತು ಪ್ರಜೆಗಳ ದೌರ್ಭಾಗ್ಯದ ಸಂಕೇತ ಇಂತಹ ದೇಶ.*
👌🌹🌹🌹🌹🌹👏
 ಇದೊಂದು ಸಮಾಜದ ನಗ್ನ ಸತ್ಯ. *ಯಾವ ದೇಶದಲ್ಲಿ ರಿಯಾಯಿತಿಗಳ* *ಅವಶ್ಯಕತೆಯಿಲ್ಲವೋ,*
*ಅಂತಹ ರಾಷ್ಟ್ರವೇ ಸಂಪನ್ನ* *ರಾಷ್ಟ್ರ. ರಿಯಾಯಿತಿಗಳು ದೇಶದ ಹೀನ ಪರಿಸ್ಥಿತಿಯ ಕನ್ನಡಿ ಇದ್ದಂತೆ.* ಕೆ.ಜಿ. ಅಕ್ಕಿಯನ್ನು ಕಡಮೆ ದರಕ್ಕೆ ಮಾರುವ ಸರ್ಕಾರಕ್ಕಿಂತ, ಎಷ್ಟು ದರವಾಗಲಿ ಕೊಳ್ಳಲು ಶಕ್ತಿ ಇರುವ ಪ್ರಜೆಗಳನ್ನು ಹೊಂದಿರುವ  ಸರ್ಕಾರವೇ ಘನ ಸರ್ಕಾರವು. ಸ್ವಚ್ಛ ಸುಪರಿಪಾಲನೆ ಮಾಡುವ ಪ್ರಭುತ್ವ. ಈ ವಿಷಯವು ಎಲ್ಲ ವಿಧಾನಗಳಿಗೂ ಅನ್ವಯಿಸುತ್ತದೆ. ಆದರೆ ಪ್ರಜೆಗಳು ಈ ವಿಷಯವನ್ನರಿತು ಎಂದು ಎಚ್ಚರ ಗೊಳ್ಳುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆ...!!



ಉಲ್ಲಾಸ ನಮ್ಮೊಳಗಿದೆ..!

ಉಲ್ಲಾಸ ನಮ್ಮೊಳಗಿದೆ..!   ಆತ ಪರ್ಶಿಯಾದ ಮಹಾರಾಜ.. ಹೆಸರು ಫ್ರೆಡ್ರಿಕ್.. ಅದೊಂದು ಸಂಜೆ ರಾಜಧಾನಿಯಿಂದ ಆಚೆ ಬಂದು ವೇಷ ಮರೆಸಿಕೊಂಡು ಸಂಚರಿಸುತ್ತಿದ್ದ. ಚಿಕ್ಕ ಓಣಿಯಲ್ಲ...