Saturday, 19 July 2025

ಉಲ್ಲಾಸ ನಮ್ಮೊಳಗಿದೆ..!



ಉಲ್ಲಾಸ ನಮ್ಮೊಳಗಿದೆ..!





 

ಆತ ಪರ್ಶಿಯಾದ ಮಹಾರಾಜ..

ಹೆಸರು ಫ್ರೆಡ್ರಿಕ್..


ಅದೊಂದು ಸಂಜೆ ರಾಜಧಾನಿಯಿಂದ ಆಚೆ ಬಂದು ವೇಷ ಮರೆಸಿಕೊಂಡು ಸಂಚರಿಸುತ್ತಿದ್ದ. ಚಿಕ್ಕ ಓಣಿಯಲ್ಲಿ ನಡೆದು ಹೋಗುವಾಗ ಒಬ್ಬ ಹಿರಿಯ ಡಿಕ್ಕಿ ಹೊಡೆದ..


ಸಂಜೆಗತ್ತಲು..ಕಿರುದಾರಿ..

ಕೇಳಬೇಕಾ? 

ಡಿಕ್ಕಿ ಆಗಿ ಹೊಯಿತು. 


ಫ್ರೆಡ್ರಿಕ್, ‘ಯಾರು ನೀನು?’ ಅಂತ ಹಿರಿಯನನ್ನು ಕೇಳಿದ. 


ಹಿರಿಯನಿಗೆ ಸಿಟ್ಟು ಬಂದು, ‘ನಾನೊಬ್ಬ ಚಕ್ರವರ್ತಿ’ ಅಂದ..


ರಾಜ ಚಕಿತಗೊಂಡ. 


‘ನೀನು ಚಕ್ರವರ್ತಿನಾ? ಅದಾವ ಸಾಮ್ರಾಜ್ಯವೊ ನಿನ್ನದು?!’ ಅಂತ ವ್ಯಂಗ್ಯವಾಗಿ ಕೇಳಿದ. 


‘ನನ್ನದೇ ಅದು ಸಾಮ್ರಾಜ್ಯ’ ಅಂತ ಹೇಳಿ ಹಿರಿಯ ಹೊರಟು ಹೋದ..


ನಾವು ಏನೆಲ್ಲವನ್ನು ಗೆಲ್ಲಬಹುದು. ಆಳಬಹುದು. ಆದರೆ ನಮ್ಮನ್ನು ನಾವು ಆಳಿಕೊಳ್ಳದ ಹೊರತು ಉಳಿದಿದ್ದೆಲ್ಲ ವ್ಯರ್ಥ. 


ಅಲೆಗ್ಸಾಂಡರ್ ಎಲ್ಲವನ್ನೂ ಗೆದ್ದು ಹೊರಟ. ಅದರಲ್ಲಿ ಸಿಗದ ಖುಷಿ ಕೊನೆಗೆ ಆತ ತನ್ನನ್ನು ಗೆದ್ದುಕೊಳ್ಳುವುದರಲ್ಲಿ ಸಿಕ್ಕಿತು. 


ಯಾರನ್ನೋ ಸೋಲಿಸುತ್ತೇನೆ, ನೋವು ಮಾಡುತ್ತೇನೆ ಅಂತ ಹೊರಟರೆ ಖಂಡಿತ ಅಲ್ಲಿ ಏನೂ ಸಿಗಲಾರದು. ಬದಲಿಗೆ ಅದು ನಮ್ಮನ್ನು ದಾರಿದ್ರ್ಯಕ್ಕೆ ತಳ್ಳುತ್ತದೆ. 


ಚಕ್ರವರ್ತಿಗಳಂತೆ ಕಂಡವರು ಚಕ್ರವರ್ತಿಗಳಲ್ಲ! 

ಮನಸ್ಸನ್ನು ಗೆದ್ದಕೊಂಡವನೇ ಚಕ್ರವರ್ತಿ. ಒಂದು ಚಕ್ರಾಧಿಪತ್ಯದ ನಿಜ ಸುಖ ಆತನಿಗೆ ಮಾತ್ರ ಸಿಗುತ್ತದೆ.


ಹೊರಗಿನ ಹಂಬಲಗಳು ‘ಬೇಕು ಬೇಕು’ ಅನಿಸುತ್ತವೆ. ಇಷ್ಟಕ್ಕೆ ಅಷ್ಟು, ಅಷ್ಟಕ್ಕೆ ಮತ್ತಷ್ಟು. ಒಳಗಿನ ಹಂಬಲಗಳನ್ನು ಗೆದ್ದವನಿಗೆ ಹಸಿವು ಕೂಡ ಸುಖವೆನಿಸುತ್ತದೆ. ವಚನಕಾರರು ‘ಮನಸಿನಂತೆ ಮಹಾದೇವ’ ಅಂದಿದ್ದು ಇದೇ ಅರ್ಥದಲ್ಲಿ. ನಮ್ಮ ಮನಸ್ಸಿನ ಜಗತ್ತನ್ನು ಗೆಲ್ಲದ ಹೊರತು ಎಂದಿಗೂ ಉಲ್ಲಾಸ ಸಿಗದು..!


Sunday, 9 August 2020

ಒಂದು ಮಲಯಾಳಂ ಮೆಸೇಜ್..


ಒಂದು ಮಲಯಾಳಂ ಮೆಸೇಜ್... 



                     


ಇಂದು ಮಳೆ ನುಡಿಯಿತು..

ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ-ಬೇಡ ಅಂತ... ನೀವು ನನ್ನ ದಾರಿ ಅಡ್ಡಗಟ್ಟಿ ದಿರಿ..

ಹೊಳೆಯೂ ಹೇಳಿತು.

ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ...

ಆದರೆ ನೀವು ನನ್ನ ಹೃದಯ ಹಿಸುಕಿ, ನನ್ನ ದಡವನ್ನು ಆಕ್ರಮಿಸಿದಿರಿ.

ಭೂಮಿಯೂ ಹೇಳಿತು.

ಅಂದು ನಾನು ಸಾಕಷ್ಟು ಜಲ ಹೀರಿದ್ದೆ.. ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ...

ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯಕ್ಕೆ ನೀವು ಮಣ್ಣು ತುಂಬಿದಿರಿ....

ಬೆಟ್ಟಗಳೂ ನುಡಿಯಿತು...

ಅಂದು ನಾನು ಭೀಕರ ಗಾಳಿ-ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ.. 

ಆದರೆ ನೀವು ನನ್ನ ಕಾಲು ತುಂಡರಿಸಿದಿರಿ...

ನನಗೆ ಕಾಲು ಗಟ್ಟಿ ಊರಲಾಗದೆ ಭೂಕುಸಿದು ಬೀಳುತ್ತಿದೆ..

ಈಗ ಮಳೆ ಕೇಳುತ್ತಿದೆ..

ನೀವು ಮಣ್ಣು ತುಂಬಿದ ನದಿ-ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ? ನಾನು ನನ್ನ ಪಾಡಿಗೆ ಹೋಗುವೆ....

ಹೊಳೆ ಕೇಳುತ್ತಿದೆ...

ನನ್ನಿಂದ ನೀವು ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ?ನಾನು ನನ್ನ ದಾರಿಯಲ್ಲೇ ಹೋಗುವೆ...

ಭೂಮಿ ಕೇಳುತ್ತಿದೆ...

ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯ ವಾಪಸ್ಸು ಕೊಡುವಿರಾ? ನಾನು ಅಲ್ಲೇ ಹಾಯಾಗಿರುವೆ....

ಬೆಟ್ಟಗಳು ಕೇಳುತ್ತಿವೆ...

ಇನ್ನಾದರೂ ನನ್ನ ಕಾಲು-ಕಡಿಯುವುದನ್ನು ನಿಲ್ಲಿಸುವಿರಾ? ನಾನು ಒಂಟಿ ಕಾಲಲ್ಲಾದರೂ ಗಟ್ಟಿ ಕಾಲೂರಲು ಪ್ರಯತ್ನಿಸುವೆ....

ನೆನಪಿರಲಿ...

_‌ನಾವು ಮನುಷ್ಯರು ಪ್ರಕೃತಿಯ ಕಾವಲುಗಾರರು ಮಾತ್ರ ಒಡೆಯರಲ್ಲ....

ಮರೆತರೆ..

ಪ್ರಕೃತಿಯೇ... ಅದು ಏನೆಂಬುದನ್ನು ನಮಗೆ ಕಲಿಸಿಕೊಡುತ್ತದೆ....

ಈ ಮಳೆಗಾಲ ಅದಕ್ಕೊಂದು ಉದಾಹರಣೆ ಮಾತ್ರ...

Wednesday, 15 July 2020

ಬಡ ಶ್ರೀಮಂತರೋ, ಶ್ರೀಮಂತ ಬಡವರೋ ?

ಬಡ ಶ್ರೀಮಂತರೋ,

ಶ್ರೀಮಂತ ಬಡವರೋ ?




ಏನಿದು ವಿಚಿತ್ರ? 
ಬಡವರು ಎಂದರೆ ಅಥವಾ ಶ್ರೀಮಂತರು ಎಂದರೆ ಅರ್ಥ ಮಾಡಿಕೊಳ್ಳಬಹುದು..
ಆದರೆ ಬಡ-ಶ್ರೀಮಂತರೆಂದರೆ ಅಥವಾ ಶ್ರೀಮಂತ-ಬಡವ ರೆಂದರೆ ಅರ್ಥ ಮಾಡಿಕೊಳ್ಳುವುದು ಹೇಗೆ..? 

ಅದಕ್ಕೆ ಸಂಬಂಧಪಟ್ಟ ಪುಟ್ಟ ಪ್ರಸಂಗವೊಂದು ಇಲ್ಲಿದೆ..

ಒಂದೂರಿನಲ್ಲಿ ಒಬ್ಬ ಸಾಹುಕಾರರು ತಮ್ಮ ಮಕ್ಕಳು, ಮೊಮ್ಮಕ್ಕಳೇ ಅಲ್ಲ, ಮರಿಮಕ್ಕಳೂ ಕುಳಿತು ತಿಂದರೂ ಕಡಿಮೆಯಾಗ ದಷ್ಟು ಆಸ್ತಿ-ಪಾಸ್ತಿ ಮಾಡಿಟ್ಟಿದ್ದರು..
ಎಣಿಸಲಾಗದಷ್ಟು ಹಣ ಗಳಿಸಿಟ್ಟಿದ್ದರು. 
ಅವರಿಗೂ ವಯಸ್ಸಾಯಿತು..
ಅನಾ ರೋಗ್ಯ ಆವರಿಸಿತು. ಕೊನೆಗಾಲ ಸಮೀಪಿಸಿತು.. 

ಇನ್ನೇನು ಈಗಲೋ ಪ್ರಾಣ ಹೋಗುವ ಸಮಯ ಅರೆಪ್ರಜ್ಞಾವಸ್ಥೆಯಲ್ಲಿ ಅವರು ಮಲಗಿದ್ದರು..
ಮಕ್ಕಳು, ಮೊಮ್ಮಕ್ಕಳು ಅವರ ಹಾಸಿಗೆಯ ಸುತ್ತ ನಿಂತಿದ್ದರು. 

ಆಗ ಅವರ ಮೊಮ್ಮಕ್ಕಳಲ್ಲಿ ಒಬ್ಬನಿಗೆ ಏನೋ ಕುತೂಹಲ..
ಅವನು ಅಜ್ಜನ ಪ್ರಾಣ ಹೋದ ಮೇಲೆ, ಅವರ ಹೆಣವನ್ನು ಸ್ಮಶಾನಕ್ಕೆ ಹೇಗೆ ಸಾಗಿಸುತ್ತಾರೆ..? ಎಂದು ಕೇಳಿದ.

ಆಗ ಸಾಹುಕಾರರ ಪತ್ನಿ ಕಣ್ಣೀರು ಸುರಿಸುತ್ತಾ, "ವಿಶೇಷವಾಗಿ ಪುಷ್ಪಾಲಂಕೃತವಾದ ಲಾರಿಯಲ್ಲಿ ಹೆಣವನ್ನಿಟ್ಟು ಮೆರವಣಿಗೆಯಲ್ಲಿ ಸ್ಮಶಾನದತ್ತ ಹೋಗಲಾಗುತ್ತದೆ..
ಮುಂದೆ ದೊಡ್ಡ ಬ್ಯಾಂಡ್ ಸೆಟ್ ಇರುತ್ತದೆ..
ಮೆರವಣಿಗೆಯ ಹಿಂದೆ ನಾವೆಲ್ಲ ಕಾರುಗಳಲ್ಲಿ ಹೋಗು ತ್ತೇವೆ" ಎಂದರು..

ತಕ್ಷಣ ಸಿರಿವಂತರ ಹಿರಿಯ ಮಗ, "ತೆರೆದ ಲಾರಿಗೆ, ಪುಷ್ಪಗಳ ಅಲಂಕಾರಕ್ಕೆ, ದೊಡ್ಡ ಬ್ಯಾಂಡ್ ಸೆಟ್ಟಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ" ಎಂದರು..

ಆಗ ಎರಡನೆಯ ಮಗ ನಿಧಾನವಾಗಿ "ಪುಷ್ಪಾಲಂಕೃತ ವಾಹನ ದೊಡ್ಡ ಬ್ಯಾಂಡ್ ಸೆಟ್ಟುಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಇದೇನು ಮದುವೆಯ ಮೆರವಣಿಗೆಯೇ? 
ಅವೆಲ್ಲ ಏನೂ ಬೇಡ..
ಅಂತಿಮಯಾತ್ರೆಗೆ ಒಂದು ಟೆಂಪೋ ತರಿಸಿದರಾಯಿತು.
ಹತ್ತು-ಹದಿನೈದು ಸಾವಿರ ಖರ್ಚು ಮಾಡಿದರೆ ಸಾಕಲ್ಲವೇ? " ಎಂದರು. 

ಆಗ ಮೂರನೆಯ ಮಗ "ಟೆಂಪೋಗಾಗಿ, ಮೆರವಣಿಗೆಗಾಗಿ ಸಾವಿರಾರು ರೂಪಾಯಿಗಳು ಏಕೆ ಖರ್ಚು ಮಾಡಬೇಕು? 
ನಗರ ಕಾರ್ಪೋರೇಷನ್ನಿನವರಿಗೆ ಫೋನ್ ಮಾಡಿದರೆ ಅವರು ಉಚಿತ ವಾಗಿ ವ್ಯಾನ್ ಕಳುಹಿಸಿಕೊಡುತ್ತಾರೆ. ನಾವೆಲ್ಲ ಅದರಲ್ಲೇ ಕುಳಿತು ಹೋದರಾಯಿತು. ಹಣವೂ ಉಳಿತಾಯವಾಗುತ್ತದೆ. ಸಮಯ ವೂ ಉಳಿಯುತ್ತದೆ!" ಎಂದ..

ಆಗ ಕೊನೆಯುಸಿರಿಗೆ ಪರದಾಡುತ್ತಿದ್ದ ಸಾಹುಕಾರರು ಕಷ್ಟಪಟ್ಟು ಕಣ್ತೆರೆದು,  "ಯಾರಾದರು ನನ್ನ ಪಾದರಕ್ಷೆಗಳನ್ನು ತಂದು ಕೊಡುತ್ತೀರಾ?" ಎಂದು ಮೆಲುದನಿಯಲ್ಲಿ ಕೇಳಿದರು..

ಹಿರಿಯ ಮಗ, "ಪ್ರಾಣ ಹೋಗುವ ಸಮಯದಲ್ಲಿ ನಿಮಗೆ ಪಾದರಕ್ಷೆಗಳೇಕೆ ಬೇಕು?" ಎಂದು ಕೇಳಿದರು..

ಸಾಹುಕಾರರು, "ನಾನು ಪಾದರಕ್ಷೆಗಳನ್ನು ಹಾಕಿಕೊಂಡು ಕಾಲ್ನಡಿಗೆಯಲ್ಲೇ ಸ್ಮಶಾನಕ್ಕೇ ಹೋಗಿ ಸಾಯುತ್ತೇನೆ..
ನೀವೆಲ್ಲ ನನ್ನ ಹಿಂದೆಯೇ ಕಾಲ್ನಡಿಗೆಯಲ್ಲೇ ನಡೆದು ಬನ್ನಿ. ನನ್ನ ಅಂತ್ಯಕ್ರಿಯೆ ನಡೆಸಿ ಹಿಂತಿರುಗಿ" ಎಂದರು..

ತಕ್ಷಣ ಮಕ್ಕಳು, ಮೊಮ್ಮಕ್ಕಳೆಲ್ಲ ಒಕ್ಕೊರಲಿನಿಂದ, "ಅದರಿಂದ ಏನು ಪ್ರಯೋಜನ?" ಎಂದು ಕೇಳಿದರು. 

ಸಿರಿವಂತರು, "ನಾನು ಸ್ಮಶಾನದವರೆಗೂ ನಡೆದುಕೊಂಡು ಹೋಗುವುದರಿಂದ, ನೀವೆಲ್ಲ ನನ್ನ ಹಿಂದೆ ನಡೆದು ಬರುವುದರಿಂದ ಅಂತಿಮ ಯಾತ್ರೆಯ ಖರ್ಚೆಲ್ಲ ಉಳಿತಾಯ ವಾಗುತ್ತದೆ ಮತ್ತು ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿರುವ ನಾನು ಸಾಯುವ ಸಮಯದಲ್ಲಿ ಸ್ಮಶಾನದವರೆಗೆ ನಡೆದು ಹೋಗುವುದನ್ನೂ ಹಿಂದೆ ನೀವೆಲ್ಲ ನಡೆದು ಬರುವುದನ್ನೂ, ನೋಡಿದವರಿಗೆ ನಾನು ಎಂತಹ ಕೃತಘ್ನ ಮಕ್ಕಳಿಗಾಗಿ ಹಣ ಸಂಪಾದನೆ ಮಾಡಿಟ್ಟೆನೆಂದು ಗೊತ್ತಾಗುತ್ತದೆ.."
ಎಂದು ಹೇಳಿದರು..

ಈ ಕತೆಯಲ್ಲಿ ಬರುವ ಧನದಲ್ಲಿ ಸಾಹುಕಾರರಾದರೂ, ಮನದಲ್ಲಿ ಬಡವರಾದ ’ಬಡ-ಶ್ರೀಮಂತರ’ನ್ನು ನೀವೂ ಕಂಡಿರಬಹುದು..!


ನಾವು ಸಾಹುಕಾರರಾಗದಿದ್ದರೆ ಚಿಂತೆಯಿಲ್ಲ.., 
ಆದರೆ ಅಂತಹ ಬಡ-ಶ್ರೀಮಂತರಾಗದಿದ್ದರೆ ಸಾಕಲ್ಲವೇ..? 

ಬಡತನ-ಶ್ರೀಮಂತಿಕೆಗಳು ಅದೃಷ್ಟದ ಆಟವಿರಬಹುದು..! 
ಆದರೆ ಬಡ-ಶ್ರೀಮಂತಿಕೆ ಅಥವಾ ಶ್ರೀಮಂತ-ಬಡತನ ನಾವೇ ಬೆಳೆಸಿಕೊಳ್ಳುವ ಮನಃಸ್ಥಿತಿ ಅಲ್ಲವೇ..?

Monday, 6 July 2020

ನೀತಿಕಥೆ...

ನೀತಿಕಥೆ...





ಎಂದಿನಂತೆ ಪ್ರಶ್ನೆಗಳ ಸರಮಾಲೆಯನ್ನು ತಲೆಯಲ್ಲಿರಿಸಿಕೊಂಡೇ ಶಿಷ್ಯ ಗುರುಗಳ ಮುಂದೆ ಹಾಜರಾದ... 

‘ಗುರುಗಳೇ ಆತ್ಮವಿಶ್ವಾಸಕ್ಕೂ, ಅಹಂಕಾರಕ್ಕೂ ವ್ಯತ್ಯಾಸವಿದೆಯೇ?’ ಎಂದು ಕೇಳಿದ.

‘ಹೌದು, ಎರಡರ ಮಧ್ಯೆ ಕೂದಲೆಳೆಯಷ್ಟೇ ವ್ಯತ್ಯಾಸವಿದೆ’ ಎಂದರು ಗುರುಗಳು.

‘ಇನ್ನೂ ಸ್ವಲ್ಪ ಬಿಡಿಸಿ ಅರ್ಥವಾಗುವಂತೆ ಹೇಳುವಿರಾ?’ ಶಿಷ್ಯ ಕೇಳಿಕೊಂಡ.

‘ಆಯ್ತು ಹೇಳುತ್ತೇನೆ ಕೇಳು. ‘ಈ ಕೆಲಸವನ್ನು ನಾನು ಮಾಡಬಲ್ಲೆ’ ಎಂದುಕೊಳ್ಳುವುದು ಆತ್ಮವಿಶ್ವಾಸ. ‘ಈ ಕೆಲಸವನ್ನು ನಾನು ಮಾತ್ರ ಮಾಡಬಲ್ಲೆ’ ಎಂದು ಬೀಗುವುದು ಅಹಂಕಾರ’ ಎಂದರು ಗುರುಗಳು.

‘ಗುರುಗಳೇ ಮನುಷ್ಯನ ನಿಜ ಸಾಮರ್ಥ್ಯವನ್ನು, ಆಸೆ-ಆಕಾಂಕ್ಷೆಗಳನ್ನು ತಡೆದು ನಿಲ್ಲಿಸುತ್ತಿರುವುದು ಯಾವುದು?’ ಎರಡನೆ ಪ್ರಶ್ನೆಯನ್ನು ಗುರುಗಳ ಮುಂದೆ ಒಗೆದು ಸುಮ್ಮನೆ ನಿಂತ ಶಿಷ್ಯ..

‘ಈ ಪ್ರಶ್ನೆ ತುಂಬಾ ಚೆನ್ನಾಗಿದೆ. ‘ಅಯ್ಯೋ ನೋಡಿದವರು ಏನಂದುಕೊಳ್ತಾರೆ?’ ಎಂದು ಜನ ಭಾವಿಸುತ್ತಾರಲ್ಲ ಅದುವೇ ಮನುಷ್ಯನ ಸಾಮರ್ಥ್ಯವನ್ನು ಮಣ್ಣುಪಾಲು ಮಾಡುತ್ತಿರುವುದು’.

‘ಅರ್ಥವಾಗಲಿಲ್ಲ ಗುರುಗಳೇ!’ ‘ಒಂದು ಉದಾಹರಣೆ ಕೊಡುತ್ತೇನೆ ಕೇಳು. ನೀನು ಸಂಶೋಧನೆ ಮಾಡಬೇಕು ಎಂದುಕೊಂಡಿದ್ದೀಯ. 
ಆ ಸಾಮರ್ಥ್ಯವೂ ನಿನ್ನಲ್ಲಿದೆ. ಆದರೆ ನೀನು ‘ಅಯ್ಯೋ ನೋಡಿದವರು ಏನಂತಾರೆ? ಒಂದು ವೇಳೆ ನಾನು ಸೋತು ಬಿಟ್ಟರೆ ಜನ ನನ್ನನ್ನು ನೋಡಿ ನಗುತ್ತಾರೇನೋ’ ಎಂದೆಲ್ಲಾ ಯೋಚಿಸಲು ಶುರು ಮಾಡುತ್ತೀಯ. ಆಗ ನೀನು ಕೆಲಸ ಶುರು ಮಾಡುವ ಮೊದಲೇ ಅರ್ಧ ಸೋತಂತೆ..

ಪಕ್ಕದಮನೆಯವರು ಏನಂತಾರೆ, ನೆಂಟರಿಷ್ಟರು ಏನಂತಾರೆ, ಅವರು ಏನಂತಾರೆ, ಇವರು ಏನಂತಾರೆ… ಎಂದೆಲ್ಲಾ ಯೋಚಿಸುವ ಅಗತ್ಯವಿದೆಯೇ? 
ನಮಗೆ ಯಾರು ಅತ್ಯಂತ ಆಪ್ತರೋ, ನಮ್ಮ ನಿರ್ಧಾರದಿಂದ ಯಾರಿಗೆ ಪರಿಣಾಮವಾಗುತ್ತದೋ ಅವರ ಅಭಿಪ್ರಾಯ ಪಡೆದುಕೊಂಡರೆ ಸಾಕು ತಾನೇ? 
ಇಡೀ ಜಗತ್ತಿನ ಅಭಿಪ್ರಾಯ ನಮಗೇಕೆ ಬೇಕು, ನಾವು ಮಾಡುವುದನ್ನು ಜಗತ್ತೇಕೆ ಒಪ್ಪಿಕೊಳ್ಳಬೇಕು? 
ಇಡೀ ಜಗತ್ತನ್ನು ಮೆಚ್ಚಿಸಬೇಕು ಎಂದು ಹೊರಡುವ ನಮ್ಮ ಮಂಕುಬುದ್ಧಿಯೇ ನಮ್ಮ ಶಕ್ತಿಯನ್ನು ಕುಗ್ಗಿಸುತ್ತಿರುವುದು’ ಎಂದರು ಗುರುಗಳು..


ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ...

ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ...




ಈ ಪ್ರಪಂಚದಲ್ಲಿ ಜನರಿಗೆ ಅನೇಕ ಕಡೆಗಳಿಂದ ಜ್ಞಾನದ ಕೊಡುಗೆ ದೊರೆಯುತ್ತದೆ..
ಬಹಳ ಮಂದಿ ಸಲಹೆ, ಉಪದೇಶ, ಪ್ರವಚನಗಳನ್ನು ನೀಡುತ್ತಾರೆ. ಅನೇಕ ಗ್ರಂಥಗಳು ಮತ್ತು ಪತ್ರಿಕೆಗಳಲ್ಲಿ ಅನೇಕ ಅಮೂಲ್ಯ ತತ್ವ ಸಿದ್ಧಾಂತ ವಿಚಾರಗಳು ದೊರೆಯುತ್ತವೆ..
ಇಂತಹ ಜ್ಞಾನದ ರಾಶಿಯನ್ನು ಸಂಗ್ರಹಿಸಿದರೆ ಸಾಲದು. ಅವುಗಳನ್ನು ಅರಗಿಸಿಕೊಂಡು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯ ಕೂಡ ಇರುವುದು ಅತ್ಯವಶ್ಯಕ ಎಂಬುದನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ..

ರಾಜಸ್ಥಾನದ ಜೈಪುರದಲ್ಲಿ ಭಾನು ಪ್ರತಾಪನೆಂಬ ಒಬ್ಬ ರಾಜನಿದ್ದನು.
ಒಮ್ಮೆ ಆತನು ಅರಮನೆ ಬಳಿಯ ಉದ್ಯಾನದಲ್ಲಿ ಅಡ್ಡಾಡುತ್ತಿದ್ದನು..
ಅಲ್ಲೊಂದು ಹಕ್ಕಿಯು ಬಳ್ಳಿಯ ಬಳಿಗೆ ಬಂದು ಸಿಹಿ-ಸಿಹಿ ದ್ರಾಕ್ಷಿಗಳನ್ನು ಆರಿಸಿ ತಿನ್ನುವುದನ್ನು, ಹುಳಿ ದ್ರಾಕ್ಷಿಗಳನ್ನು ಉದುರಿಸುವುದನ್ನೂ ಕಂಡರು..

ಅಲ್ಲಿದ್ದ ತೋಟಗಾರನು
ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಆತ ರಾಜನಿಗೇ ವರದಿ ನೀಡಿದ. ಆಗ ರಾಜನು ತಾನೇ ಆಸಕ್ತಿಯಿಂದ ಅದನ್ನು ಹಿಡಿದು ಪಾಠ ಕಲಿಸಲು ನಿಶ್ಚಯಿಸಿದ.

ಮರು ದಿನ ರಾಜನು ತೋಟದಲ್ಲಿ ಆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತನು ಮತ್ತು ಆ ಹಕ್ಕಿ ದ್ರಾಕ್ಷಿಯ ಬಳಿಗೆ ಬಂದಾಗ ಅದರ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡನು..
ಅದರ ಕುತ್ತಿಗೆ ಹಿಚುಕುವ ಮೊದಲೇ ಆ ಹಕ್ಕಿಯು ಹೇಳಿತು- ''ಹೇ ರಾಜನ್‌, ನಾನು ನಿಮಗೆ ಜ್ಞಾನದ ನಾಲ್ಕು ಮುಖ್ಯ ವಿಷಯಗಳನ್ನು ಹೇಳುತ್ತೇನೆ. ನನ್ನನ್ನು ಕೊಲ್ಲಬೇಡಿ..'' 

ರಾಜ ನುಡಿದನು- ''ಆಗಲಿ ಬೇಗ ಹೇಳು..''

ಹಕ್ಕಿ ಹೇಳಿತು- ''ಮೊದಲನೆಯದಾಗಿ ಕೈಗೆ ಬಂದ ಶತ್ರುವನ್ನು ಎಂದೂ ಬಿಡಬೇಡ..'' 

ರಾಜ ಕೇಳಿದ- ''ಸರಿ, ಎರಡನೇ ಸಂಗತಿ?'' 

ಹಕ್ಕಿ ನುಡಿಯಿತು- 'ಅಸಂಭವ ವಿಷಯವನ್ನು ನಂಬಬೇಡ..
ಮೂರನೇ ಸಂಗತಿಯೆಂದರೆ ಕಳೆದ ವಿಷಯಗಳ ಬಗ್ಗೆ ಪಶ್ಚಾತ್ತಾಪ ಬೇಡ..'' 

ಆಗ ರಾಜ ಪ್ರಶ್ನಿಸಿದ- ''ಸರಿ ನಾಲ್ಕನೇ ವಿಷಯವೇನು?'' 

ಆಗ ಹಕ್ಕಿ ಹೇಳಿತು- ''ಇದು ಬಹಳ ಗೂಢವೂ, ರಹಸ್ಯಪೂರ್ಣವೂ ಆಗಿದೆ..
ನನಗೆ ಉಸಿರು ಗಟ್ಟಿದಂತಾಗಿದೆ. ನನ್ನ ಕುತ್ತಿಗೆ ಸ್ವಲ್ಪ ಸಡಿಲ ಮಾಡಿರಿ..''

ರಾಜನು ಹಕ್ಕಿಯ ಮಾತು ನಂಬಿ ಕೈ ಸಡಿಲ ಮಾಡಿದ..

ಆಗ ಹಕ್ಕಿ 'ಬದುಕಿದೆಯಾ ಬಡ ಜೀವಾ' ಎಂದು ಹಾರಿ ಒಂದು ಕೊಂಬೆಯ ಮೇಲೆ ಕುಳಿತಿತು. 


ರಾಜನು ಅಚ್ಚರಿಯಿಂದ ನೋಡಿದ..
ಆಗ ಹಕ್ಕಿ ನುಡಿಯಿತು- ''ಹೇ ರಾಜನ್‌, ನಾಲ್ಕನೆ ಸಂಗತಿಯೇನೆಂದರೆ, ಜ್ಞಾನದ ಮಾತು ಕೇಳಿ, ಓದಿದರೆ ಏನೇನೋ ಫಲವಿಲ್ಲ..
ಆಚರಣೆಗೆ ತರುವುದು ಮುಖ್ಯ. ನಾನು ನಿಮ್ಮ ಬಳಿ ಬಂದಾಗ ನನ್ನನ್ನು ಹಿಡಿದಿರಿ. ನನ್ನ ಸವಿಸವಿ ಮಾತುಗಳನ್ನು ನಂಬಿ ನನ್ನನ್ನು ಬಿಟ್ಟು ಬಿಟ್ಟಿರಿ. ಪಡೆದ ಜ್ಞಾನವನ್ನು ಬಳಸಿಕೊಳ್ಳಲಿಲ್ಲ..'' ಎಂದು ನುಡಿದ ಹಕ್ಕಿ ಹಾರಿ ಹೋಯಿತು..
ನಾಚಿಕೊಂಡ ರಾಜನು ಸುಸ್ತಾಗಿ ಬಿಟ್ಟ...

ಇಡೀ ವಿಶ್ವಕ್ಕೇ ಇಲ್ಲೊಂದು ಅಮೂಲ್ಯ ಸಂದೇಶವಿದೆ-'ಜ್ಞಾನವನ್ನು ಸಂಗ್ರಹಿಸಲು ಪರಿಶ್ರಮ ವಹಿಸಿದರೆ ಸಾಲದು. ಸಂಗ್ರಹಿಸಿದ ಜ್ಞಾನವನ್ನು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯವೂ ನಮ್ಮಲ್ಲಿರಬೇಕು..

Saturday, 4 July 2020

ಖಂಡಿತವಾಗಿಯೂ ಕಾಪಾಡಿ! ಆದರೆ ಕಾಪಾಡಿದೆವೆಂದು ಕಾಡಬೇಡಿ....!

ಖಂಡಿತವಾಗಿಯೂ ಕಾಪಾಡಿ!
ಆದರೆ ಕಾಪಾಡಿದೆವೆಂದು ಕಾಡಬೇಡಿ....!




ಕಾಪಾಡುವುದು ಎಂದರೆ ಅರ್ಥವಾಗುತ್ತದೆ. ಯಾರೋ ಅಪಾಯದಲ್ಲಿದ್ದಾಗ, ಪ್ರಾಣ ಕಳೆದುಕೊಳ್ಳುವಂಥ ಆಪತ್ತಿನಲ್ಲಿದ್ದಾಗ, ಅವರ ಸಹಾಯಕ್ಕೆ ಹೋಗುವುದೂ, ಅವರ ಪ್ರಾಣ ಉಳಿಸುವುದೂ ಕಾಪಾಡುವುದು ಎನಿಸಿಕೊಳ್ಳುತ್ತದೆ ಅಲ್ಲವೇ? 
ಆದರೆ ಕಾಪಾಡಿದೆವೆಂದು ಕಾಡುವುದು ಎಂದರೇನು ಎಂಬುದು ಅರ್ಥವಾಗುವುದಿಲ್ಲ ಅಲ್ಲವೇ?
ಇದನ್ನು ವಿವರಿಸುವ ಮುಲ್ಲಾ ನಸರುದ್ದೀನರ ಬದುಕಿನ ಘಟನೆಯೊಂದು ಇಲ್ಲಿದೆ...

ಒಮ್ಮೆ ನಸರುದ್ದೀನರು ಸರೋವರದ ಮೆಟ್ಟಿಲುಗಳ ಮೇಲೆ ನಿಂತು ಕೈ ಕಾಲು ತೊಳೆದುಕೊಳ್ಳುತ್ತಿದ್ದರು..
ಆಕಸ್ಮಿಕವಾಗಿ ಕಾಲು ಜಾರಿ ನೀರಿನೊಳಕ್ಕೆ ಬಿದ್ದುಬಿಟ್ಟರು..
ನೀರಿಗೆ ಬಿದ್ದಾಗ ಗಾಬರಿಗೊಂಡ ಅವರು ತಮಗೆ ಈಜು ಬರುತ್ತದೆಂಬುದನ್ನೂ ಮರೆತು ಬಿಟ್ಟರು. 
‘ಕಾಪಾಡಿ! ಕಾಪಾಡಿ!’ ಎಂದು ಕೂಗಿಕೊಂಡರು. 
ಆಗ ಅಲ್ಲಿಯೇ ನಡೆದು ಹೋಗುತ್ತಿದ್ದ ಒಬ್ಬ ಪಂಡಿತರಿಗೆ ಇವರ ಕಿರುಚಾಟ ಕೇಳಿಸಿತು. ಅವರು ಧಾವಿಸಿ ಬಂದು ತಮ್ಮ ಕೈ ಚಾಚಿದರು.
ನಸರುದ್ದೀನರಿಗೆ ನೀರಿನಿಂದ ಹೊರಕ್ಕೆ ಬರಲು ಸಹಾಯ ಮಾಡಿದರು. ಆನಂತರ ಪಂಡಿತರಿಗೆ ತಾವು ಸಹಾಯ ಮಾಡಿ ಕಾಪಾಡಿದ್ದು ಊರಿನವರಿಗೆಲ್ಲ ಪರಿಚಿತರಾದ ನಸರುದ್ದೀನರನ್ನು ಎಂಬುದರ ಅರಿವಾಯಿತು. 

ಅವರ ಮತ್ತು ನಸರುದ್ದೀನರ ನಡುವೆ ಅಂಥ ಮಧುರ ಬಾಂಧವ್ಯವೇನೂ ಇರಲಿಲ್ಲ. 
ಏಕೆಂದರೆ ಪಂಡಿತ- ಪಂಡಿತರ ನಡುವೆ ಇರಬಹುದಾದಂಥ ಅಹಮ್ಮಿನ ಶೀತಲ ಸಮರವಿತ್ತು. 
ನಸರುದ್ದೀನರು ಪಂಡಿತರಿಗೆ ಧನ್ಯವಾದ ಹೇಳಿ ಹೋದರು. 

ಆದರೆ ಪಂಡಿತರು ಈ ಘಟನೆಯನ್ನು ಮರೆಯಲಿಲ್ಲ. ಊರಿನಲ್ಲಿ ಸಿಕ್ಕಸಿಕ್ಕವರಿಗೆಲ್ಲ, ‘ನಸರುದ್ದೀನರು ಸರೋವರದಲ್ಲಿ ಸಾಯುವ ಅಪಾಯದಲ್ಲಿದ್ದಾಗ ಅವರ ಕೈ ಹಿಡಿದು ಕಾಪಾಡಿದ್ದುಪಂಡಿತನಾದ ನಾನು! 
ನಾನಿಲ್ಲದಿದ್ದರೆ ಅವರು ಬದುಕುಳಿಯುತ್ತಲೇ ಇರಲಿಲ್ಲ’ ಎಂದೆಲ್ಲ ಹೇಳಿಕೊಳ್ಳತೊಡಗಿದರು..

ಪಂಡಿತರ ಮಾತುಗಳನ್ನು ಕೇಳಿಸಿಕೊಂಡ ಊರಿನವರೆಲ್ಲ ನಜರುದ್ದೀನರ ಬಳಿ ಬಂದು ‘ನಿಮ್ಮ ಪ್ರಾಣವನ್ನುಳಿಸಿ ಕಾಪಾಡಿದವರು ಪಂಡಿತರಂತೆ! ಹೌದಾ?’ ಎಂದು ಕೇಳತೊಡಗಿದರು. 

ಹತ್ತಾರು ಜನ ಹೀಗೆ ಕೇಳಿದಾಗ, ನಸರುದ್ದೀನರಿಗೆ ಬಹಳ ಕಸಿವಿಸಿಯಾಯಿತು. ಕ್ರಮೇಣ ಬೇಸರವೂ ಉಂಟಾಯಿತು. 

ಅವರು ನೇರವಾಗಿ ಪಂಡಿತರನ್ನು ಭೇಟಿಯಾದರು. ಪಂಡಿತರನ್ನು ಒತ್ತಾಯದಿಂದ ಮತ್ತೆ ಸರೋವರದ ಬಳಿ ಕರೆದೊಯ್ದರು. ಅವರನ್ನು ಸರೋವರದ ದಡದಲ್ಲಿ ನಿಲ್ಲಿಸಿ ತಾವು ನೀರಿಗೆ ಧುಮುಕಿದರು. ನಿರಾಳವಾಗಿ ಈಜು ಹೊಡೆದರು. ಮತ್ತೆ ದಡಕ್ಕೆ ಬಂದು ಸೇರಿದರು. 

ಪಂಡಿತರನ್ನುದ್ದೇಶಿಸಿ ‘ನೋಡಿ, ಅಂದು ನಾನು ದಡ ಸೇರಲು ನೀವು ಸಹಾಯ ಮಾಡಿರಬಹುದು. ಆದರೆ ಅದನ್ನೇ ಎಲ್ಲರೊಂದಿಗೆ ಹೇಳಿಕೊಂಡು ಬರುತ್ತಿದ್ದೀರಿ. ನಿಮ್ಮಿಂದ ಏಕೆ ಕಾಪಾಡಲ್ಪಟ್ಟೆನೋ ಎನ್ನುವಷ್ಟು ಬೇಸರವನ್ನುಂಟು ಮಾಡಿದ್ದೀರಿ. ಈಗ ನೀವೇ ನೋಡಿದ್ದೀರಿ. ನನಗೆ ಈಜು ಬರುತ್ತದೆ. ಅಂದು ನೀವಿಲ್ಲದಿದ್ದರೂ ನಾನು ಹೇಗೋ ಬಚಾವಾಗುತ್ತಿದ್ದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬೇಕು..

ದಯವಿಟ್ಟು ಇನ್ನು ಮುಂದೆ ಊರಿನವರಿಗೆಲ್ಲ ನಸರುದ್ದೀನರ ಪ್ರಾಣ ಉಳಿಸಿದ್ದು ನಾನೇ, ಅವರನ್ನು ಕಾಪಾಡಿದ್ದು ನಾನೇ ಎಂದು ಹೇಳಿಕೊಳ್ಳುತ್ತ ತಿರುಗಬೇಡಿ’ ಎಂದು ಗದರಿಸಿ ಹೇಳಿದರು..
ಪಂಡಿತರು ಏನೂ ಮಾತನಾಡದೆ ಅಲ್ಲಿಂದ ಹೊರಟು ಹೋದರು. 

ಆದರೆ ಇದಾದ ನಂತರ ಪಂಡಿತರು ಊರಿನ ಜನರ ಬಳಿ ‘ನಸರುದ್ದೀನರು ನನ್ನ ಮುಂದೆಯೇ ಮತ್ತೊಮ್ಮೆ ನೀರಿಗೆ ಬಿದ್ದುಬಿಟ್ಟರು. ಆದರೆ ಹಿಂದೊಮ್ಮೆ ಅವರು ನೀರಿಗೆ ಬಿದ್ದಾಗ ನಾನು ಕಾಪಾಡಿದ್ದೆ. ಆದರೆ ನಸರುದ್ದೀನರು ಮತ್ತೆ ಮತ್ತೆ ನೀರಿಗೆ ಬೀಳುವುದನ್ನೇ ಹವ್ಯಾಸ ಮಾಡಿಕೊಂಡರೆ, ನಾನು ಮತ್ತೆ ಅವರನ್ನು ಕಾಪಾಡಲು ಹೋಗಲು ಸಾಧ್ಯವೇ? 
ನನಗೆ ಮಾಡಲು ಬೇರೆ ಏನೂ ಕೆಲಸವಿಲ್ಲವೇ? 
ಎರಡ ನೆಯ ಬಾರಿ ನಾನು ಅವರನ್ನು ಕಾಪಾಡಲಿಲ್ಲ. ಅವರ ಅದೃ ಷ್ಟ ಚೆನ್ನಾಗಿತ್ತು. ಹೇಗೋ ಏನೋ ಬದುಕಿಕೊಂಡರು’ ಎಂದು ಹೇಳಿಕೊಳ್ಳುತ್ತಾ ಬಂದರಂತೆ..

ಊರಿನ ಜನರು ಈ ಮಾತುಗಳನ್ನು ನಸರುದ್ದೀನರ ಗಮನಕ್ಕೆ ತಂದಾಗ, ನಸರುದ್ದೀನರು ಹಣೆ ಚಚ್ಚಿಕೊಂಡರಂತೆ..

ನಾವೂ ನಮಗೆ ಸಾಧ್ಯವಿದ್ದರೆ ಕಷ್ಟದಲ್ಲಿರುವವರಿಗೆ ಖಂಡಿತಾ ಸಹಾಯ ಮಾಡಬೇಕು. ಕಾಪಾಡಬೇಕು..
ಆದರೆ ಕಾಪಾಡಿದೆವೆಂಬುದನ್ನು ಎಲ್ಲರೊಂದಿಗೆ ಹೇಳಿಕೊಳ್ಳುತ್ತಾ ಬಂದರೆ ಅದು ಅವರನ್ನು ಕಾಡಿದಂತೆಯೇ ಅಲ್ಲವೇ?


(ಸಂಗ್ರಹ)

Friday, 3 July 2020

ಯಶಸ್ಸಿನ ರಹಸ್ಯ ಎಲ್ಲಡಗಿದೆ...?

ಯಶಸ್ಸಿನ ರಹಸ್ಯ ಎಲ್ಲಡಗಿದೆ...?




ಉತ್ಸಾಹಿ ಯುವಕನೊಬ್ಬ ಸಾಕ್ರೆಟಿಸ್​ನನ್ನು ಭೇಟಿಯಾಗಿ ‘ಯಶಸ್ಸಿನ ರಹಸ್ಯ ಎಲ್ಲಡಗಿದೆ?’ ಎಂದು ಕೇಳಿದ.

ಅದಕ್ಕೆ ಸಾಕ್ರೆಟಿಸ್, ‘ನಾಳೆ ಮುಂಜಾನೆ ನದಿಯ ದಂಡೆಗೆ ಬಾ; ಅಲ್ಲಿಯೇ ನಿನ್ನ ಪ್ರಶ್ನೆಗೆ ಉತ್ತರಿಸುವೆ’ ಎಂದ.

ಅಂತೆಯೇ ಮರುದಿನ ಬಂದ ಯುವಕನಿಗೆ ತನ್ನೊಡನೆ ನದಿಯಲ್ಲಿ ನಡೆಯುವಂತೆ ಸೂಚಿಸಿದ ಸಾಕ್ರೆಟಿಸ್. ನಡೆಯುತ್ತ ಹೋದಂತೆ ನೀರು ಆಳವಾಗಿ ಕುತ್ತಿಗೆಯವರೆಗೆ ಬಂದಾಗ ಸಾಕ್ರೆಟಿಸ್ ಆ ಯುವಕನ ಕುತ್ತಿಗೆಗೆ ಕೈಹಾಕಿ ತಲೆಯನ್ನು ನೀರಿನಲ್ಲಿ ಮುಳುಗಿಸಿದ..

ಯುವಕ ಎಷ್ಟೇ ಕೊಸರಿದರೂ ಸಾಕ್ರೆಟಿಸ್​ನ ಬಿಗಿಪಟ್ಟು ಸಡಿಲವಾಗಲಿಲ್ಲ. ಇನ್ನೇನು ಸಾಧ್ಯವೇ ಇಲ್ಲ ಎನ್ನುವಂತೆ ಯುವಕ ಒದ್ದಾಡತೊಡಗಿದಾಗ ಸಾಕ್ರೆಟಿಸ್ ಅವನ ತಲೆಯನ್ನು ನೀರಿನಿಂದ ಮೇಲಕ್ಕೆತ್ತಿದ..

ಆಘಾತದಿಂದ ಹೊರಬರುವ ಯತ್ನವಾಗಿ ಯುವಕ ದೀರ್ಘವಾಗಿ ಉಸಿರು ಎಳೆದುಕೊಂಡ, ಕ್ರಮೇಣ ಚೇತರಿಸಿಕೊಂಡ..

‘ನೀರಿನಡಿಯಲ್ಲಿ ಮುಳುಗಿದ್ದಾಗ ನಿನಗೆ ಎಲ್ಲಕ್ಕಿಂತಲೂ ಹೆಚ್ಚು ಮುಖ್ಯವೆನಿಸಿದ್ದು ಏನು?’ ಎಂದು ಪ್ರಶ್ನಿಸಿದಾಗ,

‘ಉಸಿರು, ಗಾಳಿ’ ಎಂದು ಯುವಕ ಉತ್ತರಿಸಿದ.

‘ಇದುವೇ ಯಶಸ್ಸಿನ ರಹಸ್ಯ’ ಎಂದ ಸಾಕ್ರೆಟಿಸ್.

ಯುವಕನಿಗೆ ಗೊಂದಲವಾದಾಗ, ‘ತಲೆ ನೀರಲ್ಲಿ ಮುಳುಗಿದ್ದಾಗ ಗಾಳಿಗಾಗಿ ನೀನೆಷ್ಟು ತೀವ್ರವಾಗಿ ಹಂಬಲಿಸಿದೆಯೋ ಅಷ್ಟೇ ತೀವ್ರತೆಯಿಂದ ಯಶಸ್ಸಿಗಾಗಿಯೂ ತವಕಿಸಿದರೆ, ಪರಿಶ್ರಮ ಪಟ್ಟರೆ ಅದು ನಿನ್ನದಾಗುತ್ತದೆ. ಇದರ ಹೊರತಾಗಿ ಯಶಸ್ಸಿಗೆ ರಹಸ್ಯವೇನೂ ಇಲ್ಲ’ ಎಂದು ಮುಗುಳ್ನಕ್ಕ ಸಾಕ್ರೆಟಿಸ್.


ರಷ್ಯಾದ ಪ್ರಸಿದ್ಧ ಮನೋವಿಜ್ಞಾನಿ ಪಾವ್​ಲೋವ್ ಮರಣಶಯ್ಯೆಯಲ್ಲಿದ್ದಾಗ ‘ನಿಮ್ಮ ಯಶಸ್ಸಿನ ಗುಟ್ಟೇನು?’ ಎಂದು ಶಿಷ್ಯರು ಕೌತುಕದಿಂದ ಪ್ರಶ್ನಿಸಿದರಂತೆ.

ಅದಕ್ಕೆ ಆತ ‘ತುಡಿತ ತುಡಿತ ತುಡಿತ…. ಇದೇ ನನ್ನ ಯಶಸ್ಸಿನ ಗುಟ್ಟು’ ಎಂದನಂತೆ.

ಒಂದೇ ಧ್ಯೇಯವನ್ನು ಧ್ಯಾನಿಸದೇ ಇರುವುದು, ಸ್ಪಷ್ಟ ಗುರಿಯೊಂದಕ್ಕೆ ನಿರಂತರ ನೀರೆರೆಯದಿರುವುದು ನಮ್ಮಲ್ಲಿ ಬಹುತೇಕರ ನ್ಯೂನತೆ.. ಇದನ್ನು ಸರಿಪಡಿಸಿಕೊಂಡಲ್ಲಿ ಯಶಸ್ಸಿನ ಹಾದಿ ರಹಸ್ಯವಾಗಿ ಉಳಿಯದೆ ತನ್ನಿಂತಾನೇ ತೆರೆದುಕೊಳ್ಳುತ್ತದೆ.

ಆದರೆ, ವಾಮಮಾರ್ಗ ಹಿಡಿದು ರಾತ್ರೋರಾತ್ರಿ ಯಶಸ್ಸಿನ ಕೋಟೆಗೆ ಲಗ್ಗೆಹಾಕಲು ಮುಂದಾಗುವವರು ವೈಫಲ್ಯದ ಕಂದಕಕ್ಕೆ ಬೀಳುವ ಸಂಭವವೇ ಹೆಚ್ಚು..

ಜೀವನೋಪಾಯಕ್ಕಾಗಿ ವ್ಯವಹಾರದಲ್ಲೇ ತೊಡಗಿಸಿಕೊಂಡಿರಬಹುದು ಅಥವಾ ಉದ್ಯೋಗಸ್ಥರಾಗಿರಬಹುದು, ಹಿಂದಿನ ದಿನ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದೆ, ಅನುದಿನವೂ ಉತ್ತಮಿಕೆಯನ್ನು ರೂಢಿಸಿಕೊಳ್ಳುತ್ತ ಹೋದಲ್ಲಿ, ಪರಿಪೂರ್ಣತೆಯ ತಪಸ್ಸಿಗೆ ಒಪ್ಪಿಸಿಕೊಂಡಲ್ಲಿ ಹಾಗೂ ಸುತ್ತಲಿನವರೊಡನೆ ಸ್ನೇಹಭಾವ ಮೆರೆದಲ್ಲಿ, ಸಾಧನೆಯನ್ನು ದಾಖಲಿಸುವುದು ಕಷ್ಟವೇನಲ್ಲ. ಅಂಥ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳೋಣ...

ಉಲ್ಲಾಸ ನಮ್ಮೊಳಗಿದೆ..!

ಉಲ್ಲಾಸ ನಮ್ಮೊಳಗಿದೆ..!   ಆತ ಪರ್ಶಿಯಾದ ಮಹಾರಾಜ.. ಹೆಸರು ಫ್ರೆಡ್ರಿಕ್.. ಅದೊಂದು ಸಂಜೆ ರಾಜಧಾನಿಯಿಂದ ಆಚೆ ಬಂದು ವೇಷ ಮರೆಸಿಕೊಂಡು ಸಂಚರಿಸುತ್ತಿದ್ದ. ಚಿಕ್ಕ ಓಣಿಯಲ್ಲ...