ನೀತಿಕಥೆ...

ನೀತಿಕಥೆ...


ಎಂದಿನಂತೆ ಪ್ರಶ್ನೆಗಳ ಸರಮಾಲೆಯನ್ನು ತಲೆಯಲ್ಲಿರಿಸಿಕೊಂಡೇ ಶಿಷ್ಯ ಗುರುಗಳ ಮುಂದೆ ಹಾಜರಾದ... 

‘ಗುರುಗಳೇ ಆತ್ಮವಿಶ್ವಾಸಕ್ಕೂ, ಅಹಂಕಾರಕ್ಕೂ ವ್ಯತ್ಯಾಸವಿದೆಯೇ?’ ಎಂದು ಕೇಳಿದ.

‘ಹೌದು, ಎರಡರ ಮಧ್ಯೆ ಕೂದಲೆಳೆಯಷ್ಟೇ ವ್ಯತ್ಯಾಸವಿದೆ’ ಎಂದರು ಗುರುಗಳು.

‘ಇನ್ನೂ ಸ್ವಲ್ಪ ಬಿಡಿಸಿ ಅರ್ಥವಾಗುವಂತೆ ಹೇಳುವಿರಾ?’ ಶಿಷ್ಯ ಕೇಳಿಕೊಂಡ.

‘ಆಯ್ತು ಹೇಳುತ್ತೇನೆ ಕೇಳು. ‘ಈ ಕೆಲಸವನ್ನು ನಾನು ಮಾಡಬಲ್ಲೆ’ ಎಂದುಕೊಳ್ಳುವುದು ಆತ್ಮವಿಶ್ವಾಸ. ‘ಈ ಕೆಲಸವನ್ನು ನಾನು ಮಾತ್ರ ಮಾಡಬಲ್ಲೆ’ ಎಂದು ಬೀಗುವುದು ಅಹಂಕಾರ’ ಎಂದರು ಗುರುಗಳು.

‘ಗುರುಗಳೇ ಮನುಷ್ಯನ ನಿಜ ಸಾಮರ್ಥ್ಯವನ್ನು, ಆಸೆ-ಆಕಾಂಕ್ಷೆಗಳನ್ನು ತಡೆದು ನಿಲ್ಲಿಸುತ್ತಿರುವುದು ಯಾವುದು?’ ಎರಡನೆ ಪ್ರಶ್ನೆಯನ್ನು ಗುರುಗಳ ಮುಂದೆ ಒಗೆದು ಸುಮ್ಮನೆ ನಿಂತ ಶಿಷ್ಯ..

‘ಈ ಪ್ರಶ್ನೆ ತುಂಬಾ ಚೆನ್ನಾಗಿದೆ. ‘ಅಯ್ಯೋ ನೋಡಿದವರು ಏನಂದುಕೊಳ್ತಾರೆ?’ ಎಂದು ಜನ ಭಾವಿಸುತ್ತಾರಲ್ಲ ಅದುವೇ ಮನುಷ್ಯನ ಸಾಮರ್ಥ್ಯವನ್ನು ಮಣ್ಣುಪಾಲು ಮಾಡುತ್ತಿರುವುದು’.

‘ಅರ್ಥವಾಗಲಿಲ್ಲ ಗುರುಗಳೇ!’ ‘ಒಂದು ಉದಾಹರಣೆ ಕೊಡುತ್ತೇನೆ ಕೇಳು. ನೀನು ಸಂಶೋಧನೆ ಮಾಡಬೇಕು ಎಂದುಕೊಂಡಿದ್ದೀಯ. 
ಆ ಸಾಮರ್ಥ್ಯವೂ ನಿನ್ನಲ್ಲಿದೆ. ಆದರೆ ನೀನು ‘ಅಯ್ಯೋ ನೋಡಿದವರು ಏನಂತಾರೆ? ಒಂದು ವೇಳೆ ನಾನು ಸೋತು ಬಿಟ್ಟರೆ ಜನ ನನ್ನನ್ನು ನೋಡಿ ನಗುತ್ತಾರೇನೋ’ ಎಂದೆಲ್ಲಾ ಯೋಚಿಸಲು ಶುರು ಮಾಡುತ್ತೀಯ. ಆಗ ನೀನು ಕೆಲಸ ಶುರು ಮಾಡುವ ಮೊದಲೇ ಅರ್ಧ ಸೋತಂತೆ..

ಪಕ್ಕದಮನೆಯವರು ಏನಂತಾರೆ, ನೆಂಟರಿಷ್ಟರು ಏನಂತಾರೆ, ಅವರು ಏನಂತಾರೆ, ಇವರು ಏನಂತಾರೆ… ಎಂದೆಲ್ಲಾ ಯೋಚಿಸುವ ಅಗತ್ಯವಿದೆಯೇ? 
ನಮಗೆ ಯಾರು ಅತ್ಯಂತ ಆಪ್ತರೋ, ನಮ್ಮ ನಿರ್ಧಾರದಿಂದ ಯಾರಿಗೆ ಪರಿಣಾಮವಾಗುತ್ತದೋ ಅವರ ಅಭಿಪ್ರಾಯ ಪಡೆದುಕೊಂಡರೆ ಸಾಕು ತಾನೇ? 
ಇಡೀ ಜಗತ್ತಿನ ಅಭಿಪ್ರಾಯ ನಮಗೇಕೆ ಬೇಕು, ನಾವು ಮಾಡುವುದನ್ನು ಜಗತ್ತೇಕೆ ಒಪ್ಪಿಕೊಳ್ಳಬೇಕು? 
ಇಡೀ ಜಗತ್ತನ್ನು ಮೆಚ್ಚಿಸಬೇಕು ಎಂದು ಹೊರಡುವ ನಮ್ಮ ಮಂಕುಬುದ್ಧಿಯೇ ನಮ್ಮ ಶಕ್ತಿಯನ್ನು ಕುಗ್ಗಿಸುತ್ತಿರುವುದು’ ಎಂದರು ಗುರುಗಳು..


Comments