ಯಶಸ್ಸಿನ ರಹಸ್ಯ ಎಲ್ಲಡಗಿದೆ...?

*ಯಶಸ್ಸಿನ ರಹಸ್ಯ ಎಲ್ಲಡಗಿದೆ...?*

ಉತ್ಸಾಹಿ ಯುವಕನೊಬ್ಬ ಸಾಕ್ರೆಟಿಸ್​ನನ್ನು ಭೇಟಿಯಾಗಿ ‘ಯಶಸ್ಸಿನ ರಹಸ್ಯ ಎಲ್ಲಡಗಿದೆ?’ ಎಂದು ಕೇಳಿದ.

ಅದಕ್ಕೆ ಸಾಕ್ರೆಟಿಸ್, ‘ನಾಳೆ ಮುಂಜಾನೆ ನದಿಯ ದಂಡೆಗೆ ಬಾ; ಅಲ್ಲಿಯೇ ನಿನ್ನ ಪ್ರಶ್ನೆಗೆ ಉತ್ತರಿಸುವೆ’ ಎಂದ.

ಅಂತೆಯೇ ಮರುದಿನ ಬಂದ ಯುವಕನಿಗೆ ತನ್ನೊಡನೆ ನದಿಯಲ್ಲಿ ನಡೆಯುವಂತೆ ಸೂಚಿಸಿದ ಸಾಕ್ರೆಟಿಸ್. ನಡೆಯುತ್ತ ಹೋದಂತೆ ನೀರು ಆಳವಾಗಿ ಕುತ್ತಿಗೆಯವರೆಗೆ ಬಂದಾಗ ಸಾಕ್ರೆಟಿಸ್ ಆ ಯುವಕನ ಕುತ್ತಿಗೆಗೆ ಕೈಹಾಕಿ ತಲೆಯನ್ನು ನೀರಿನಲ್ಲಿ ಮುಳುಗಿಸಿದ..

ಯುವಕ ಎಷ್ಟೇ ಕೊಸರಿದರೂ ಸಾಕ್ರೆಟಿಸ್​ನ ಬಿಗಿಪಟ್ಟು ಸಡಿಲವಾಗಲಿಲ್ಲ. ಇನ್ನೇನು ಸಾಧ್ಯವೇ ಇಲ್ಲ ಎನ್ನುವಂತೆ ಯುವಕ ಒದ್ದಾಡತೊಡಗಿದಾಗ ಸಾಕ್ರೆಟಿಸ್ ಅವನ ತಲೆಯನ್ನು ನೀರಿನಿಂದ ಮೇಲಕ್ಕೆತ್ತಿದ..

ಆಘಾತದಿಂದ ಹೊರಬರುವ ಯತ್ನವಾಗಿ ಯುವಕ ದೀರ್ಘವಾಗಿ ಉಸಿರು ಎಳೆದುಕೊಂಡ, ಕ್ರಮೇಣ ಚೇತರಿಸಿಕೊಂಡ..

‘ನೀರಿನಡಿಯಲ್ಲಿ ಮುಳುಗಿದ್ದಾಗ ನಿನಗೆ ಎಲ್ಲಕ್ಕಿಂತಲೂ ಹೆಚ್ಚು ಮುಖ್ಯವೆನಿಸಿದ್ದು ಏನು?’ ಎಂದು ಪ್ರಶ್ನಿಸಿದಾಗ,

‘ಉಸಿರು, ಗಾಳಿ’ ಎಂದು ಯುವಕ ಉತ್ತರಿಸಿದ.

‘ಇದುವೇ ಯಶಸ್ಸಿನ ರಹಸ್ಯ’ ಎಂದ ಸಾಕ್ರೆಟಿಸ್.

ಯುವಕನಿಗೆ ಗೊಂದಲವಾದಾಗ, ‘ತಲೆ ನೀರಲ್ಲಿ ಮುಳುಗಿದ್ದಾಗ ಗಾಳಿಗಾಗಿ ನೀನೆಷ್ಟು ತೀವ್ರವಾಗಿ ಹಂಬಲಿಸಿದೆಯೋ ಅಷ್ಟೇ ತೀವ್ರತೆಯಿಂದ ಯಶಸ್ಸಿಗಾಗಿಯೂ ತವಕಿಸಿದರೆ, ಪರಿಶ್ರಮ ಪಟ್ಟರೆ ಅದು ನಿನ್ನದಾಗುತ್ತದೆ. ಇದರ ಹೊರತಾಗಿ ಯಶಸ್ಸಿಗೆ ರಹಸ್ಯವೇನೂ ಇಲ್ಲ’ ಎಂದು ಮುಗುಳ್ನಕ್ಕ ಸಾಕ್ರೆಟಿಸ್.


ರಷ್ಯಾದ ಪ್ರಸಿದ್ಧ ಮನೋವಿಜ್ಞಾನಿ ಪಾವ್​ಲೋವ್ ಮರಣಶಯ್ಯೆಯಲ್ಲಿದ್ದಾಗ ‘ನಿಮ್ಮ ಯಶಸ್ಸಿನ ಗುಟ್ಟೇನು?’ ಎಂದು ಶಿಷ್ಯರು ಕೌತುಕದಿಂದ ಪ್ರಶ್ನಿಸಿದರಂತೆ.

ಅದಕ್ಕೆ ಆತ ‘ತುಡಿತ ತುಡಿತ ತುಡಿತ…. ಇದೇ ನನ್ನ ಯಶಸ್ಸಿನ ಗುಟ್ಟು’ ಎಂದನಂತೆ.

ಒಂದೇ ಧ್ಯೇಯವನ್ನು ಧ್ಯಾನಿಸದೇ ಇರುವುದು, ಸ್ಪಷ್ಟ ಗುರಿಯೊಂದಕ್ಕೆ ನಿರಂತರ ನೀರೆರೆಯದಿರುವುದು ನಮ್ಮಲ್ಲಿ ಬಹುತೇಕರ ನ್ಯೂನತೆ.. ಇದನ್ನು ಸರಿಪಡಿಸಿಕೊಂಡಲ್ಲಿ ಯಶಸ್ಸಿನ ಹಾದಿ ರಹಸ್ಯವಾಗಿ ಉಳಿಯದೆ ತನ್ನಿಂತಾನೇ ತೆರೆದುಕೊಳ್ಳುತ್ತದೆ.

ಆದರೆ, ವಾಮಮಾರ್ಗ ಹಿಡಿದು ರಾತ್ರೋರಾತ್ರಿ ಯಶಸ್ಸಿನ ಕೋಟೆಗೆ ಲಗ್ಗೆಹಾಕಲು ಮುಂದಾಗುವವರು ವೈಫಲ್ಯದ ಕಂದಕಕ್ಕೆ ಬೀಳುವ ಸಂಭವವೇ ಹೆಚ್ಚು..

ಜೀವನೋಪಾಯಕ್ಕಾಗಿ ವ್ಯವಹಾರದಲ್ಲೇ ತೊಡಗಿಸಿಕೊಂಡಿರಬಹುದು ಅಥವಾ ಉದ್ಯೋಗಸ್ಥರಾಗಿರಬಹುದು, ಹಿಂದಿನ ದಿನ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದೆ, ಅನುದಿನವೂ ಉತ್ತಮಿಕೆಯನ್ನು ರೂಢಿಸಿಕೊಳ್ಳುತ್ತ ಹೋದಲ್ಲಿ, ಪರಿಪೂರ್ಣತೆಯ ತಪಸ್ಸಿಗೆ ಒಪ್ಪಿಸಿಕೊಂಡಲ್ಲಿ ಹಾಗೂ ಸುತ್ತಲಿನವರೊಡನೆ ಸ್ನೇಹಭಾವ ಮೆರೆದಲ್ಲಿ, ಸಾಧನೆಯನ್ನು ದಾಖಲಿಸುವುದು ಕಷ್ಟವೇನಲ್ಲ. ಅಂಥ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳೋಣ...


Good morning...
*SAVE TREES...*🌳🌳🌳🌳🌳

Comments

Popular Posts