Tuesday, 16 June 2020

ದೇಹ ನೆಟ್ಟಗಿದ್ದಾಗ ಮನಸ್ಸು ನೆಟ್ಟಗಿರಲಿಲ್ಲ....!

ದೇಹ ನೆಟ್ಟಗಿದ್ದಾಗ ಮನಸ್ಸು ನೆಟ್ಟಗಿರಲಿಲ್ಲ....!




‘ನೀವು ಸಾಯಬೇಕೆಂದುಕೊಳ್ಳುತ್ತಿದ್ದೀರಾ? ನಿಮ್ಮನ್ನು ಖಿನ್ನತೆ, ಹತಾಶೆ, ಜುಗುಪ್ಸೆಗಳು ಕಾಡುತ್ತಿವೆಯಾ?
ನಿಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಹೇಳಿಕೊಳ್ಳಬಹುದು. ನನ್ನ ದೂರವಾಣಿ ಸಂಖ್ಯೆ…’

ಈ ಜಾಹೀರಾತು ದೂರದೇಶದ ದಿನಪತ್ರಿಕೆಯೊಂದರಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿತ್ತು..
ಬಹಳ ಜನರ ಗಮನ ಸೆಳೆಯುತ್ತಿತ್ತು.
ಪ್ರತಿಸಾರಿಯೂ ಕನಿಷ್ಠ ಐವತ್ತಕ್ಕೂ ಹೆಚ್ಚು ಜನ ಟೆಲಿಫೋನ್ ಮಾಡುತ್ತಿದ್ದರು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಉತ್ತರ ಕೊಡುತ್ತಿದ್ದ ಮಹಿಳೆ ಅವರು ಹೇಳುವುದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು. ಸಾಂತ್ವನ ಹೇಳುತ್ತಿದ್ದರು..

ಯಾರಾದರೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆಂದರೆ, ‘ಜಗತ್ತಿನಲ್ಲಿರುವ ಸಾವಿರಾರು ಜನರಲ್ಲಿ ಒಬ್ಬರೋ, ಇಬ್ಬರೋ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುತ್ತಾರೆ. ಆದರೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದವರು ಎಷ್ಟೋ ವರ್ಷ ಬದುಕುತ್ತಾರೆ. ಇಂತಿಂಥ ಕ್ಯಾನ್ಸರ್‌ಗೆ ಇಂತಿಂಥ ಕಡೆ ಚಿಕಿತ್ಸೆ ದೊರಕಬಹುದು’ಎಂದೆಲ್ಲ ವಿವರಸಹಿತ ಉತ್ತರಿಸುತ್ತಿದ್ದರು.

ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿರುವವರು ಮಾತಾಡಿದರೆ, ‘ಪ್ರಪಂಚದಲ್ಲಿ ಲಕ್ಷ ಜನಕ್ಕೆ ಕೇವಲ ಮೂರು ಜನ ಸಿರಿವಂತರು. ಉಳಿದವರಿಗೆಲ್ಲ ಆರ್ಥಿಕ ಸಮಸ್ಯೆ ಇದ್ದೇ ಇರುತ್ತದೆ. ನೀವು ನಿರ್ಗತಿಕರಲ್ಲ. ನೀವೇಕೆ ಹತಾಶರಾಗಬೇಕು?’ಎಂದು ಸಮಾಧಾನ ಪಡಿಸುತ್ತಿದ್ದರು.

ಹೀಗೆಯೇ ಗಂಡ-ಹೆಂಡಿರ, ತಂದೆ-ಮಕ್ಕಳ, ಉದ್ಯೋಗಸ್ಥರ ಸಮಸ್ಯೆಗಳಿಗೆ ಆಕೆ ಉತ್ತರಿಸುತ್ತಿದ್ದರು. ಕೆಲವರಿಗೆ ಸಾಂತ್ವನ ಸಿಗುತ್ತಿತ್ತು.

ಆದರೆ ಒಂದಷ್ಟು ಜನ ಮಾತ್ರ, ‘ಬಹುಶಃ ನಿಮಗೆ ದೇವರು ಒಳ್ಳೆಯ ಆರೋಗ್ಯ, ಐಶ್ವರ್ಯ, ಎಲ್ಲ ಅನುಕೂಲಗಳನ್ನು ಕೊಟ್ಟಿರಬಹುದು. ಸಹಾನುಭೂತಿ ಸುರಿಸುವುದು ಸುಲಭದ ಕೆಲಸ’ಎಂದು ಕಟುವಾಗಿ ಟೀಕಿಸುತ್ತಿದ್ದರು.
ಆದರೆ ಆಕೆ ತನ್ನ ಕತೆ ಹೇಳಿಕೊಳ್ಳುತ್ತಿದ್ದಂತೆ ಅವರು ಕರಗಿ ನೀರಾಗುತ್ತಿದ್ದರು..

ಆಕೆಯ ಕತೆ ಹೀಗಿದೆ..

ಆಕೆ ತಕ್ಕಮಟ್ಟಿಗೆ ಅನುಕೂಲವಾಗಿದ್ದವರು.
ಆದರೆ ಬಾಲ್ಯದಿಂದಲೇ ಸಿಡುಕುವ, ಎಲ್ಲರನ್ನೂ ಸಂಶಯಿಸುವ ಮತ್ತು ಸಣ್ಣ ಕಾರಣಕ್ಕೂ ದೊಡ್ಡ ರಂಪ ಮಾಡಿ ಸಂಬಂಧಗಳನ್ನೇ ಕಳೆದುಕೊಳ್ಳುವ ಮನೋಭಾವ..
ಆಕೆ ಎಷ್ಟು ಜಗಳಗಂಟಿಯೆಂದರೆ ಯಾರೂ ಆಕೆಯ ಬಳಿ ಸುಳಿಯುತ್ತಿರಲಿಲ್ಲ. ಹಾಗಾಗಿ ಆಕೆ ಸದಾ ಏಕಾಂಗಿ. ಸದಾ ಖಿನ್ನತೆ..
ಒಮ್ಮೆ ಖಿನ್ನತೆಯ ತುತ್ತತುದಿಯಲ್ಲಿದ್ದಾಗ ಎತ್ತರದ ಕಟ್ಟಡದ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ದುರದೃಷ್ಟ ಆಕೆ ಸಾಯಲಿಲ್ಲ.
ತೀವ್ರ ಪೆಟ್ಟಾಗಿ ದೇಹದ ಕೆಳಭಾಗ ಚಲನೆಯ ಶಕ್ತಿಯನ್ನೇ ಕಳೆದುಕೊಂಡುಬಿಟ್ಟಿತು. ಯಾವಾಗಲೂ ಗಾಲಿ ಚಕ್ರದ ಗಾಡಿಯಲ್ಲೇ ಕುಳಿತಿರಬೇಕಿತ್ತು.
ತನ್ನ ಪರಿಸ್ಥಿತಿಯ ಬಗ್ಗೆ ಗಾಢವಾಗಿ ಚಿಂತಿಸುತ್ತಿದ್ದರು..

ಒಮ್ಮೆ ಆಕೆ ‘ದೇವರೆಷ್ಟು ನಿಷ್ಕರುಣಿ!’ಎಂದುಕೊಳ್ಳುತ್ತ ಮಲಗಿದರು.
ಕನಸಿನಲ್ಲಿ ದೇವರು ಬಂದು ‘ನಿನ್ನ ಪರಿಸ್ಥಿತಿಗೆ ನೀನೇ ಕಾರಣಕರ್ತಳು. ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನಿನ್ನ ದೇಹ ನೆಟ್ಟಗಿತ್ತು. ಮನಸ್ಸು ಸೊಟ್ಟಗಿತ್ತು. ಈಗ ನಿನ್ನ ಮನಸ್ಸು ನೆಟ್ಟಗಾಗಿದೆ. ಆದರೆ ದೇಹ ಸೊಟ್ಟಗಾಗಿದೆ. ಈಗಲೂ ನೀನು ಪ್ರಯತ್ನಿಸಿದರೆ ಸರಿಯಾದ ಜೀವನ ನಡೆಸಬಹುದು’ಎಂದಂತಾಯಿತು. ಆಕೆ ನಿದ್ದೆಯಿಂದೆದ್ದು ಇದರ ಬಗ್ಗೆ ಬಹಳ ಯೋಚಿಸಿದಳು. ತನ್ನ ಮನೋಭಾವ ಬದಲಿಸಿಕೊಂಡಳು.

ಸಿಟ್ಟು, ಸಿಡುಕು, ಸಂಶಯಗಳನ್ನು ನಿಧಾನವಾಗಿ ಕಡಿಮೆ ಮಾಡಿಕೊಂಡಳು. ಸದಾ ಗಾಲಿಕುರ್ಚಿಯಲ್ಲೇ ಕುಳಿತು ಕೊಂಡಿದ್ದರೂ 2 ವರ್ಷಗಳಲ್ಲಿ ಆಕೆಯ ವ್ಯವಹಾರ, ಸಂಸಾರ ಎಲ್ಲವೂ ಸುಸೂತ್ರಗೊಂಡವು. ಇದಾದ ನಂತರ ಆಕೆಗೆ ತನ್ನ ಹಾಗೆಯೇ ಸ್ವಭಾವದ ವೈಪರ್ಯತೆಯಿಂದ ಬಳಲುತ್ತಿರುವವರಿಗೆ ಏಕೆ ಸಹಾಯ ಮಾಡಬಾರದು ಎಂದೆನಿಸಿತು..

ಆಕೆ ಮೇಲಿನ ಜಾಹೀರಾತನ್ನು ಕೊಟ್ಟು ತನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳತೊಡಗಿದಳು. ಟೆಲಿಫೋನ್ ಮಾಡಿದವರಿಗೆಲ್ಲ ಪರಿಹಾರ ಸಿಗದಿದ್ದರೂ, ತಮ್ಮ ಸಮಸ್ಯೆಯನ್ನು ಮತ್ತೊಬ್ಬರು ತಾಳ್ಮೆಯಿಂದ ಕೇಳಿಸಿಕೊಂಡ ಸಮಾಧಾನ ಅವರಿಗಾಗುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಈ ‘ಕೇಳುವಿಕೆ’ಸಾಯಲು ಹೊರಟವರನ್ನು ಬದುಕಿಸಿದೆಯೆಂದು ಬಲ್ಲವರು ಹೇಳುತ್ತಾರೆ...!

Thursday, 11 June 2020

ಎರಡು ಊರುಗಳ ಕತೆ...

ಎರಡು ಊರುಗಳ ಕತೆ...!

ಕುತೂಹಲಕಾರಿಯಾದ ಕತೆಯೊಂದು ಇಲ್ಲಿದೆ! ಎರಡು ಊರುಗಳಿಗೆ, ಜನರುಗಳಿಗೆ ಸಂಬಂಧಿಸಿದ ಕತೆ!

ಒಮ್ಮೆ ಸಿಖ್ಖರ ಧರ್ಮಗುರುಗಳಾದ ಪೂಜ್ಯ ಗುರುನಾನಕ ದೇವರು ಒಂದೂರಿನ ಮೂಲಕ ಹಾದು ಹೋಗುತ್ತಿದ್ದರು. ಸಂಜೆಯ ಸಮಯವಾಗಿತ್ತು. ಅಂದು ರಾತ್ರಿ ತಂಗಲು ಊರಿನ ಯಾರದ್ದಾದರೂ ಮನೆಯಲ್ಲಿ ಊಟ-ವಸತಿ ಸಿಗುವುದೇನೋ ವಿಚಾರಿಸಲು ಶಿಷ್ಯರಿಗೆ ಹೇಳಿದರು. ಆದರೆ ಆ ಊರಿನವರು ಯಾರೂ ಗುರುನಾನಕರಿಗೆ ಮತ್ತವರ ಶಿಷ್ಯರುಗಳಿಗೆ ಒಂದು ದಿನದ ಮಟ್ಟಿಗೆ ಊಟ-ವಸತಿಯನ್ನು ನೀಡಲು ಮುಂದೆ ಬರ ಲಿಲ್ಲ. ಕೆಲವರು ನೇರವಾಗಿಯೇ ನಿರಾಕರಿಸಿದರೆ, ಕೆಲವರು ಅವರನ್ನು ಅನುಮಾನ ದಿಂದ ನೋಡಿದರು. ದೂಷಣೆಯ ಮಾತುಗಳನ್ನಾಡಿದರು. ನಿಂದಿಸಿದರು. ಅವಮಾನ ಮಾಡಿದರು.

ಅನ್ಯಮಾರ್ಗವಿಲ್ಲದೆ ಗುರುನಾನಕರು ಶಿಷ್ಯರೊಂದಿಗೆ ಮರದ ಕೆಳಗೆ ರಾತ್ರಿಯನ್ನು ಕಳೆಯಬೇಕಾಯಿತು. ಅಂದು ರಾತ್ರಿ ಗುರುಗಳ ಭಜನೆ-ಸತ್ಸಂಗಗಳಿಗೂ ಊರಿನವರು ಒಬ್ಬರೂ ಬರಲಿಲ್ಲ.

ಮರುದಿನ ಗುರುಗಳು ಪ್ರಯಾಣವನ್ನು ಮುಂದುವರೆಸಲು ಹೊರಟು ನಿಂತಾಗ, ಆ ಊರಿನ ಹಲವಾರು ಜನ ಒಣ ಕುತೂಹಲದಿಂದ ಅವರನ್ನೇ ನೋಡುತ್ತ ನಿಂತಿದ್ದರು. ಹಿಂದಿನ ರಾತ್ರಿ ಉಪವಾಸವಿದ್ದ ಅಸಮಾಧಾನ ಗುರುಗಳ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ಅವರು ಹಸನ್ಮುಖರಾಗಿದ್ದರು.

ಊರಿನವರೊಬ್ಬರು ಊರಿನವರಿಗೆ ಒಂದು ಆಶೀರ್ವಾದವನ್ನು ಮಾಡಿ ಹೋಗಿ ಎಂದರು. ಗುರುನಾನಕರು ನಸುನಗುತ್ತಾ ಒಳ್ಳೆಯದು. ಊರಿನವರೆಲ್ಲ ನಿಮ್ಮೂರಿನಲ್ಲೇ ಸುಖ ವಾಗಿ ಇರುವಂತೆ ಆಗಲೆಂದು ಹಾರೈಸುತ್ತೇವೆ ಎಂದು ಹೊರಟರು.

ಅಂದು ದಿನವಿಡೀ ಪ್ರಯಾಣ ಮಾಡಿ, ರಾತ್ರಿಯ ಹೊತ್ತಿಗೆ ಮತ್ತೊಂದು ಊರಿಗೆ ಬಂದರು. ಅವರು ತಮ್ಮ ಶಿಷ್ಯರಿಗೆ ಈ ಊರಿ ನಲ್ಲಾದರೂ ಊಟ-ವಸತಿಯ ವ್ಯವಸ್ಥೆ ಆಗುವುದೇನೋ ನೋಡಿ ಎಂದರು. ಆಶ್ಚರ್ಯವೆಂದರೆ ಈ ಊರಿನ ಜನರೆಲ್ಲ ಇವರನ್ನು ಬಹಳ ಆದರದಿಂದ ಬರಮಾಡಿಕೊಂಡರು. ಒಳ್ಳೆಯ ಔತಣಕೂಟವನ್ನೇರ್ಪಡಿಸಿದರು. ವಸತಿಗೂ ವ್ಯವಸ್ಥೆ ಮಾಡಿದ್ದರು. ಅಂದು ರಾತ್ರಿಯ ಸತ್ಸಂಗಕ್ಕೂ ಬಹಳ ಜನ ಬಂದಿದ್ದರು. ಗುರುನಾನಕರೂ ಮತ್ತವರ ಶಿಷ್ಯರು ಆನಂದದಿಂದ ರಾತ್ರಿ ಕಳೆದರು.

ಮರುದಿನ ಅವರೆಲ್ಲ ಹೊರಟು ನಿಂತಾಗ, ಊರಿನವರೆಲ್ಲ ಗೌರವದಿಂದ ಬೀಳ್ಕೊಟ್ಟರು. ಆಗ ಅವರೂ ಗುರುಗಳನ್ನು ತಮ್ಮೂರಿಗೆ ಒಳ್ಳೆಯ ಆಶೀರ್ವಾದ ಮಾಡಿ ಹೋಗಲು ಕೇಳಿಕೊಂಡರು.

ಆಗ ಗುರುನಾನಕ ದೇವರು ನಿಮಗೆಲ್ಲ ಒಳ್ಳೆಯದಾಗಲಿ. ನೀವೆಲ್ಲ ಊರು ಬಿಟ್ಟು ಹೋಗುವಂತಾಗಲಿ ಎಂದರು.

ಅವರ ಮಾತುಗಳನ್ನು ಕೇಳಿ ಊರಿನವರಿಗಿಂತ ಶಿಷ್ಯಂದಿರಿಗೇ ಹೆಚ್ಚು ಆಶ್ಚರ್ಯ. ಅವರು ’ನಿನ್ನೆ ಊಟ-ವಸತಿಯನ್ನೂ ನೀಡದೆ ಅನಾನುಕೂಲವನ್ನುಂಟು ಮಾಡಿದ ಊರಿನವರಿಗೆ ನೀವು ನಿಮ್ಮೂರಿನಲ್ಲೇ ಸುಖವಾಗಿರಿ ಎಂದು ಆಶೀರ್ವಾದ ಮಾಡಿದಿರಿ. ಆದರೆ ಬಹಳ ಚೆನ್ನಾಗಿ ನೋಡಿಕೊಂಡ ಈ ಊರಿನವರಿಗೆ ನೀವೆಲ್ಲ ಊರು ಬಿಟ್ಟು ಹೋಗು ವಂತಾಗಲಿ ಎಂದು ಹಾರೈಸುತ್ತೀರಲ್ಲಾ? ಎಂದು ಕೇಳಿದರು.

ಆಗ ಗುರುಗಳು ಆ ಊರಿನವರು ಒಳ್ಳೆಯ ಮಾತನ್ನಾಡುವುದಿಲ್ಲ. ಯಾರನ್ನೂ ಗೌರವಿಸುವುದಿಲ್ಲ. ಊಟ-ವಸತಿಗಳನ್ನು ನೀಡುವು ದಿಲ್ಲ. ಹಾಗಾಗಿ ಬೇರೆ ಯಾವುದಾದರೂ ಊರಿಗೆ ಹೋದರೆ ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಹೊಸ ಊರಿನವರಿಗೂ ಅನಾನುಕೂಲ ಉಂಟು ಮಾಡುತ್ತಾರೆ. ಆದುದರಿಂದ ಅವರು ಅವರ ಊರಿನಲ್ಲೇ ಉಳಿಯುವುದು ಅವರಿಗೇ ಒಳ್ಳೆಯದು. ಆದರೆ ಈ ಊರಿನವರು ಸಜ್ಜನಿಕೆ ಉಳ್ಳವರು. ಅವರು ಎಲ್ಲಿ ಹೋದರೂ ಸಜ್ಜನಿಕೆಯಿಂದಲೇ ವರ್ತಿಸುತ್ತಾರೆ. ಸಜ್ಜನಿಕೆಯನ್ನು ಹರಡುತ್ತಾರೆ. ಅವರೂ ಸುಖವಾಗಿರುತ್ತಾರೆ. ಅವರು ಹೋದ ಊರಿನವರೂ ಸುಖವಾಗಿರುತ್ತಾರೆ. ಆದುದರಿಂದ ಅವರು ಊರು ಬಿಟ್ಟು ಹೊರಗೆ ಹೋಗಿ ಸಜ್ಜನಿಕೆಯನ್ನು ಹರಡುವಂತಾಗಲಿ ಎಂದು ಹಾರೈಸಿದೆ ಎಂದಾಗ, ಊರಿನವರೂ ಮತ್ತು ಶಿಷ್ಯರೂ ಆನಂದಪಟ್ಟರಂತೆ.

ದೇಶವೆಂದರೆ ಬರೀ ಮಣ್ಣಲ್ಲ!
ಅದು ಅಲ್ಲಿನ ಮನುಷ್ಯರು!
ಎಂಬ ಅರ್ಥ ಬರುವ ತೆಲುಗು ಮಾತೊಂದು ಇದೆ. ಅಲ್ಲಿನ ಮನುಷ್ಯ ರಿಂದಲೇ ಅಲ್ಲವೇ, ಆ ಊರಿಗೂ, ಊರಿನವರಿಗೂ ಒಳ್ಳೆಯದಾಗುವುದು! ಅವರ ಭಾವನೆಗಳಿಂದ ಶುಭ ಆಶೀರ್ವಾದಗಳು ದೊರೆ ಯುವುದು!


ನಿಷ್ಠೆಯ ದುಡಿಮೆಯ ಮಹತ್ವ...*

ನಿಷ್ಠೆಯ ದುಡಿಮೆಯ ಮಹತ್ವ...

ದೊಂಬರಾಟದ ಹುಡುಗ ಡೋಲಿನ ಶಬ್ದಕ್ಕೆ ಎತ್ತೆತ್ತರಕ್ಕೆ ಜಿಗಿಯಬಲ್ಲವನಾಗಿದ್ದ!

ಒಮ್ಮೆ ಬೀದಿಯಲ್ಲಿ ಅವನ ಪ್ರದರ್ಶನ ನಡೆಯುವಾಗ, ಅದನ್ನು ಕಂಡ ಕಳ್ಳನೊಬ್ಬನ ಮನಸ್ಸಿನಲ್ಲಿ ಧುತ್ತನೆ ಉಪಾಯವೊಂದು ಸ್ಪುರಿಸಿತು. ಈತನ ಸಾಮರ್ಥ್ಯವನ್ನು ತಾನು ಸಮರ್ಥವಾಗಿ ಬಳಸಿಕೊಂಡರೆ ಮಹಡಿಯ ಮೇಲೆ ಮಹಡಿ ಕಟ್ಟಿರುವ ಶ್ರೀಮಂತರ ಮನೆಗಳಿಗೆ ಸುಲಭವಾಗಿ ಲಗ್ಗೆಹಾಕಬಹುದು, ಹೆಚ್ಚೆಚ್ಚು ಲೂಟಿ ಹೊಡೆಯಬಹುದು; ಶ್ರೀಮಂತರು ಮನೆಯಲ್ಲಿ ಇಲ್ಲದ ವೇಳೆ ಈ ಹುಡುಗ ಹೊರಗಡೆಯಿಂದ ಒಂದೇ ಬಾರಿಗೆ ಗೋಡೆಯ ಮೇಲೆ ಜಿಗಿದು ಒಳಗಿಳಿದು ಚಿಲಕ ತೆಗೆದರೆ, ಮುಂದಿನ ಕೆಲಸ ತನಗೆ ಸುಲಭವಾಗುತ್ತದೆ ಎಂದು ಆ ಕಳ್ಳ ಯೋಜಿಸಿದ.

ಅಂತೆಯೇ, ಆಟ ಮುಗಿಯುತ್ತಿದ್ದಂತೆ ಆ ಹುಡುಗನನ್ನು ಭೇಟಿಯಾಗಿ ತನ್ನ ಉಪಾಯವನ್ನು ಅರುಹಿದ. ಶ್ರೀಮಂತಿಕೆಯ ಪ್ರಲೋಭನೆಗೆ ಒಳಗಾದ ಹುಡುಗ ಅದಕ್ಕೆ ಸಮ್ಮತಿಸಿದ..

ಊರಿನ ಅನುಕೂಲಸ್ಥರೊಬ್ಬರ ಮನೆಯನ್ನು ಅಂದು ರಾತ್ರಿ ದೋಚುವುದೆಂದು ತೀರ್ವನವಾಯಿತು.
ಅಂತೆಯೇ ಅಲ್ಲಿಗೆ ಹುಡುಗನೊಂದಿಗೆ ಬಂದ ಕಳ್ಳ, ‘ಬೇಗ ಗೋಡೆಯ ಮೇಲೆ ಜಿಗಿದು ಒಳಗಿನಿಂದ ಚಿಲಕ ತೆಗೆ’ ಎಂದು ಆತನ ಕಿವಿಯಲ್ಲಿ ಪಿಸುಗುಟ್ಟಿದ.

ಅದಕ್ಕಾತ, ‘ಜಿಗಿಯುತ್ತೇನೆ, ನೀನು ಮೊದಲು ಡೋಲು ಬಾರಿಸು’ ಎಂದ ಮೆಲುದನಿಯಲ್ಲಿ.

ಈ ಹುಡುಗನಿಗೆ ಲಾಗ ಹೊಡೆಯಲು ಪ್ರೇರೇಪಿಸುತ್ತಿದ್ದ ಸಂಗತಿ ಯಾವುದು ಎಂದು ಕಳ್ಳನಿಗೆ ಗೊತ್ತಾಗಿದ್ದು ಆಗಲೇ..!
ಉಪಾಯ ವಿಫಲಗೊಂಡಿದ್ದಕ್ಕೆ ಕಳ್ಳ ನಿರಾಶೆಯಿಂದ ಹಿಂದಿರುಗಿದ..


ಕಳ್ಳ ಮತ್ತು ಕಳ್ಳತನ ಇಲ್ಲಿ ನಿಮಿತ್ತ ಮಾತ್ರ. ನಮ್ಮಲ್ಲಿ ಬಹುತೇಕರ ಸ್ಥಿತಿ ಈ ಹುಡುಗನಂತೆಯೇ- ಅದೇ ಪ್ರೇರಣೆಗಾಗಿ ಕಾಯುವುದು...

ನಿಯೋಜಿತ ಕೆಲಸವನ್ನು ಮನಸ್ಸಿಟ್ಟು ಮಾಡಿದರೆ, ಅದರಲ್ಲಿ ರುಚಿ ಸಿಗುವುದು ನಿಶ್ಚಿತ. ಆಗ ಅದೇ ಪ್ರೇರಣಾದಾಯಿ ಆಗಬಲ್ಲದು. ಭಗವದ್ಗೀತೆಯಲ್ಲಿ
*‘ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ’* ಎಂಬುದೊಂದು ಸೂಕ್ತಿಯಿದೆ. ಅಂದರೆ, ತಮ್ಮ ತಮ್ಮ ಸ್ವಾಭಾವಿಕ ಕೆಲಸಗಳಲ್ಲಿ ತತ್ಪರತೆಯಿಂದ ತೊಡಗಿರುವವರು ಪರಮಸಿದ್ಧಿ ಪಡೆಯುತ್ತಾರೆ ಎಂದರ್ಥ. ಕಾರ್ಯಸಾಧನೆಗೆ ನಿಷ್ಠೆ ಮತ್ತು ಪರಿಶ್ರಮದ ದುಡಿತವೇ ಮಾಗೋಪಾಯ; ವಾಮಮಾರ್ಗದಿಂದ ದಕ್ಕಿಸಿಕೊಂಡಿದ್ದು ಬಹುಕಾಲ ಬಾಳುವುದಿಲ್ಲ ಎಂಬುದನ್ನು ಮರೆಯದಿರೋಣ...


ಉಲ್ಲಾಸ ನಮ್ಮೊಳಗಿದೆ..!

ಉಲ್ಲಾಸ ನಮ್ಮೊಳಗಿದೆ..!   ಆತ ಪರ್ಶಿಯಾದ ಮಹಾರಾಜ.. ಹೆಸರು ಫ್ರೆಡ್ರಿಕ್.. ಅದೊಂದು ಸಂಜೆ ರಾಜಧಾನಿಯಿಂದ ಆಚೆ ಬಂದು ವೇಷ ಮರೆಸಿಕೊಂಡು ಸಂಚರಿಸುತ್ತಿದ್ದ. ಚಿಕ್ಕ ಓಣಿಯಲ್ಲ...